ಮೈಸೂರು :ಕೋವಿಡ್-19 ಪರೀಕ್ಷೆ ಸಂದರ್ಭದಲ್ಲಿ ಕಡ್ಡಾಯವಾಗಿ ಮೊಬೈಲ್ ನಂಬರ್ ಕೊಡಬೇಕು ಎಂಬ ನಿಯಮವಿದೆ. ಆದರೆ, ಇಲ್ಲೊಬ್ಬ ಜಿಲ್ಲಾಧಿಕಾರಿಗಳ ಮೊಬೈಲ್ ನಂಬರ್ ಕೊಟ್ಟು ವೈದ್ಯಾಧಿಕಾರಿಗಳನ್ನೇ ಯಾಮಾರಿಸಿದ್ದಾನೆ.
ನಗರದ ಹೆಬ್ಬಾಳದ ನಿವಾಸಿಯೊಬ್ಬರು ಗಂಟಲು ಮತ್ತು ಮೂಗು ದ್ರವ ಪರೀಕ್ಷೆಗೆ ಬಂದ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು, ಪರೀಕ್ಷೆ ನಡೆಸಲು ಆತನ ವಿವರ ಮತ್ತು ಮೊಬೈಲ್ ನಂಬರ್ ಕೇಳಿದಾಗ ಎರಡನ್ನೂ ತಪ್ಪಾಗಿ ಕೊಟ್ಟಿದ್ದಾನೆ. ಆತ ಕೊಟ್ಟಿದ್ದು ಜಿಲ್ಲಾಧಿಕಾರಿಗಳ ಮೊಬೈಲ್ ನಂಬರ್ ಆಗಿತ್ತು.
ಗೊತ್ತಾಗಿದ್ದು ಹೇಗೆ? :ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಹೋದ ವ್ಯಕ್ತಿಯ ಪರೀಕ್ಷಾ ವರದಿ ಬಂದಿದ್ದು, ಆತನಿಗೆ ಪಾಸಿಟಿವ್ ಬಂದಿದೆ. ತಕ್ಷಣ ವೈದ್ಯಾಧಿಕಾರಿಗಳು ಆತ ನೀಡಿದ ಮೊಬೈಲ್ ನಂಬರ್ಗೆ ಕರೆ ಮಾಡಿ ನಿಮ್ಮ ಫಲಿತಾಂಶ ಪಾಸಿಟಿವ್ ಬಂದಿದೆ. ತಕ್ಷಣ ಕ್ವಾರಂಟೈನ್ ಆಗಿ ಎಂದು ಹೇಳಿದ್ದಾಗ ಜಿಲ್ಲಾಧಿಕಾರಿಗಳಿಗೆ ಆಶ್ಚರ್ಯವಾಯಿತು.
ಕರೆ ಸ್ವೀಕರಿಸಿದ ಅವರು, ನಾನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಎಂದಿದ್ದಾರೆ. ಆಗ ವೈದ್ಯಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಕೋವಿಡ್ ಪರೀಕ್ಷೆಗೊಳಗಾದ ವ್ಯಕ್ತಿ, ತಪ್ಪಿಸಿಕೊಳ್ಳಲು ಬೇರೆ ಮೊಬೈಲ್ ನಂಬರ್ ಕೊಟ್ಟಿದ್ದಾನೆ. ಕೊರೊನಾ ಹರಡುವುದನ್ನು ತಪ್ಪಿಸಲು ಜನರು ಸಹಕರಿಸಬೇಕು. ತಪ್ಪು ಮಾಹಿತಿ ನೀಡಬಾರದು ಎಂದು ತಮಗಾದ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.