ಮೈಸೂರು:ತಲಕಾಡಿಗೆ ಬರುವ ಪ್ರವಾಸಿಗರು ಕಾವೇರಿ ನದಿ ನೀರಲ್ಲಿ ಮೋಜು ಮಸ್ತಿ ಮಾಡಿ ಹಿಂತಿರುಗಬೇಡಿ. ಗತಕಾಲದ ವೈಭವದ ಇತಿಹಾಸ ಸಾರುವ ಇಲ್ಲಿನ ಸುಪ್ರಸಿದ್ಧ ದೇವಸ್ಥಾನಗಳಿಗೂ ಭೇಟಿ ನೀಡಿ, ಶಿಲ್ಪ ವೈಭವ ಕಣ್ತುಂಬಿಕೊಳ್ಳಿ ಎಂದು ಸಾರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ನೀರಲ್ಲಿ ಬರೇ ಮೋಜು ಬೇಡ,ಈ ದೇಗುಲಗಳನ್ನೂ ಒಮ್ಮೆ ನೋಡಿ! ವಿಡಿಯೋ - undefined
ಇತಿಹಾಸ ಪ್ರಸಿದ್ಧ ತಲಕಾಡಿಗೆ ಬಂದು ಮೋಜು ಮಸ್ತಿ ಮಾಡುವುದನ್ನು ಬಿಟ್ಟು, ಇಲ್ಲಿನ ಐತಿಹಾಸಿಕ ದೇವಾಲಯಗಳನ್ನೂ ನೋಡಿ ಎಂದು ಸ್ಥಳೀಯ ಯುವಕರು ಮಾಡಿರುವ ವಿಡಿಯೋ ಅರ್ಥಪೂರ್ಣವಾಗಿದೆ.

ಮೈಸೂರು ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ತಲಕಾಡು ನಿಸರ್ಗ ವೈಭವವನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ತಲಕಾಡಿನಲ್ಲಿ ಸಾವಿರ ವರ್ಷಗಳಷ್ಟು ಹಿಂದೆ ಗಂಗರು ಹಾಗೂ ಚಾಲುಕ್ಯ ರಾಜರುಗಳು ಕಟ್ಟಿಸಿದ ಪ್ರಸಿದ್ಧ ದೇವಾಲಯಗಳಾದ ವೈದ್ಯನಾಥೇಶ್ವರ, ಮರುಳೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಕೀರ್ತಿನಾರಾಯಣ ದೇವಾಲಯಗಳಿದ್ದು ಪುರಾತನ ಭಾರತದ ವೈಭವ ಸಾರುತ್ತಿವೆ. ಆದರೆ ಮೈಸೂರಿಗೆ ಬರುವ ಪ್ರವಾಸಿಗರು ತಲಕಾಡಿಗೆ ಬಂದು ಇಲ್ಲಿನ ಕಾವೇರಿ ನಿಸರ್ಗಧಾಮದಲ್ಲಿ ಮೋಜು-ಮಸ್ತಿ ಮಾಡಿ ದೇವಾಲಯಕ್ಕೆ ಹೋಗದೇ ವಾಪಸಾಗುತ್ತಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೋ ವೈರಲ್:
ಸುಂದರ ಶಿಲ್ಪ ವೈಭವವನ್ನು ಸಾರುವ ಇಂತಹ ದೇವಾಲಯಗಳನ್ನು ನೋಡದೇ ಪ್ರವಾಸಿಗರು ಬರೀ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ಕೊಟ್ಟು ಹಿಂತಿರುಗುವುದರಿಂದ ಸ್ಥಳೀಯ ಯುವಕರು ಬೇಸರಗೊಂಡಿದ್ದಾರೆ. ಹೀಗಾಗಿ ಪ್ರವಾಸಿಗರನ್ನು ಸೆಳೆಯಲು ಇಲ್ಲಿನ ಯುವಕರೇ ದೇವಾಲಯಗಳ ಸುತ್ತ ಇರುವ, ನೈಸರ್ಗಿಕ ಸೊಬಗು ಹಾಗೂ ದೇವಾಲಯದ ಒಳಗಿರುವ ಸುಂದರ ಶಿಲ್ಪ ಕಲೆಗಳನ್ನು ಒಮ್ಮೆ ನೋಡಿ ಎಂದು ಸಾರುವ ವಿಡಿಯೋವನ್ನು ಡ್ರೋಣ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.