ಮೈಸೂರು :ಬೆಳ್ಳಿ ಆಸೆಗಾಗಿ ಕೆಲಸ ಕೊಟ್ಟ ಮಾಲೀಕನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಕಾರ್ಮಿಕನನ್ನು ಲಷ್ಕರ್ ಠಾಣೆಯ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ರಾಜಸ್ಥಾನ ಮೂಲದ 28 ವರ್ಷದ ಅರ್ಜುನ್ ಕುಮಾರ್ನನ್ನು ಬಂಧಿಸಿ, ಕೊಲೆ ಮಾಡಿ ಗೋವಿಂದ ಕುಮಾರ್ ಎಂಬುವರ ಬಳಿಯಿಂದ ದೋಚಿದ್ದ 8 ಲಕ್ಷ ರೂಪಾಯಿ ಮೌಲ್ಯದ 12 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಲೆಯಾದ ಗೋವಿಂದ ಕುಮಾರ್ ಅವರನ್ನು ನಗರದ ಸುಮತಿನಾಥ ಜೈನ್ ಮಂದಿರದ ಗೋಪುರಕ್ಕೆ ಬೆಳ್ಳಿಯಿಂದ ಪ್ರಭಾವತಿ ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿಯವರು ಕರೆಸಿದ್ದರು. ಗೋಪುರ ನಿರ್ಮಾಣಕ್ಕಾಗಿ 14 ಕೆಜಿ ಬೆಳ್ಳಿಯ ಗಟ್ಟಿಯನ್ನು ಅವರಿಗೆ ನೀಡಿದ್ದರು. ಈ ಕೆಲಸಕ್ಕಾಗಿ ಗೋವಿಂದ ಕುಮಾರ್ ತಮ್ಮ ಊರಾದ ರಾಜಸ್ಥಾನದಿಂದ ಅರ್ಜುನ್ ಕುಮಾರ್ ಅವರನ್ನು ಕರೆಸಿಕೊಂಡು ಹಳ್ಳದಕೇರಿಯಲ್ಲಿನ ಮನೆಯಲ್ಲಿ ತಂಗಿದ್ದರು.
ಆರೋಪಿಯಿಂದ ವಶಪಡಿಸಿಕೊಂಡ ಬೆಳ್ಳಿ ಮನೆಯಲ್ಲಿದ್ದ ಬೆಳ್ಳಿಯನ್ನು ಕದಿಯುವ ಉದ್ದೇಶವನ್ನು ಹೊಂದಿದ್ದ ಅರ್ಜುನ್ ಕುಮಾರ್ ಕಳೆದ ಏಪ್ರಿಲ್ 27ರಂದು ಕೋಣೆಯಲ್ಲಿ ಮಲಗಿದ್ದಾಗ ಮರದ ಪಟ್ಟಿಯಿಂದ ಹೊಡೆದು ಗೋವಿಂದ್ ಕುಮಾರ್ನನ್ನು ಕೊಲೆ ಮಾಡಿದ್ದನು. ಕೊಲೆ ಮಾಡಿದ ಬಳಿಕ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಕೋಣೆಯ ಸೀಲಿಂಗ್ ಫ್ಯಾನ್ ಅನ್ನು ತಲೆ ಮೇಲೆ ಬೀಳಿಸಿದ್ದನು. ಫ್ಯಾನ್ ಬಿದ್ದಿದ್ದರಿಂದ ಗೋವಿಂದ ಕುಮಾರ್ ಮೃತಪಟ್ಟಿದ್ದಾರೆ ಎಂದು ನಂಬಿಸಿ, ಬೆಳ್ಳಿಯ ಗಟ್ಟಿಯೊಂದಿಗೆ ಅರ್ಜುನ್ ಪರಾರಿಯಾಗಿದ್ದನು.
ವಿಷಯ ತಿಳಿದು ಒಂದು ದಿನದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆಯ ಬಗ್ಗೆ ಅನುಮಾನಗೊಂಡು ಅರ್ಜುನ್ನನ್ನು ಹುಡುಕಿಕೊಂಡು ರಾಜಸ್ಥಾನಕ್ಕೆ ತೆರಳಿದಾಗ ಮನೆಯಲ್ಲಿ ಬೆಳ್ಳಿಗಟ್ಟಿ ಇದ್ದ ವಿಚಾರ ಗೊತ್ತಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಲಷ್ಕರ್ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಮೈಸೂರಿಗೆ ಕರೆ ತಂದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ:ಪತ್ನಿಯ ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರ: ಪೊಕ್ಸೊ ಕಾಯ್ದೆಯಡಿ ಆರೋಪಿ ಬಂಧನ