ಮೈಸೂರು :ಕಾರಾಗೃಹಗಳಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹದಿಂದ 46 ಕೈದಿಗಳನ್ನು 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್, ಕಾರಾಗೃಹಗಳಲ್ಲಿನ ಸಜಾಬಂಧಿಗಳಿಗೆ 3 ತಿಂಗಳ ಪರೋಲ್ ಮೇಲೆ ಬಿಡುಗಡೆ ಮಾಡಲು ನಿರ್ದೇಶನ ನೀಡಿತ್ತು.
ಅದರಂತೆ ಕರ್ನಾಟಕದ ಹೈಕೋರ್ಟ್ ನ್ಯಾಯಾಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಉನ್ನತ ಸಮಿತಿ, ರಾಜ್ಯದ ಕೆಲ ಕಾರಾಗೃಹಗಳಲ್ಲಿನ ಕೈದಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆಗೆ ಗುರಿಯಾದವರೂ ಸೇರಿ ಒಟ್ಟು 800 ಕೈದಿಗಳಿದ್ದಾರೆ. ಈ ಪೈಕಿ 9 ಮಹಿಳೆಯರೂ ಸೇರಿ 46 ಕೈದಿಗಳನ್ನು 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಯಾರಿಗಿಲ್ಲ ಬಿಡುಗಡೆ ಭಾಗ್ಯ
ಭಯೋತ್ಪಾದನೆ ಸಂಬಂಧಿ ಪ್ರಕರಣಗಳು, ಎಸ್ಡಿಪಿಎಸ್ ಕಾಯ್ದೆ, ಮನಿ ಲಾಂಡ್ರಿಂಗ್, ಕಾನೂನು ಬಾಹಿರ ಚಟುವಟಿಕೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಸಂಬಂಧ, ಕೋಕಾ ಕಾಯ್ದೆ, ರಾಷ್ಟ್ರಿಯ ಭದ್ರತೆ ಸಂಬಂಧ, ಆರ್ಥಿಕ ಅಪರಾಧಗಳು, ದೊಡ್ದ ಮಟ್ಟದ ಹಣಕಾಸು ವಂಚನೆ ( ಬ್ಯಾಂಕ್, ಎನ್.ಬಿ.ಎಫ್.ಸಿ, ದೊಡ್ಡಮಟ್ಟದ ಸಾರ್ವಜನಿಕ ಹಣ), ಗೂಂಡಾ ಮತ್ತು ಕಾಫಿ ಪೋಸಾ ಕಾಯ್ದೆ, ಕಾರಾಗೃಹ ಶಿಸ್ತು ಉಲ್ಲಂಫಿಸಿದ ಪ್ರಕರಣ, ವಿಶೇಷ ಕೇಂದ್ರ ಕಾಯ್ದೆ ಈ ಪ್ರಕರಣಗಳ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಮತ್ತು ಆರೋಪ ಎದುರಿಸುತ್ತಿರುವ ಕೈದಿಗಳು ಪರೋಲ್ಗೆ ಅರ್ಹರಲ್ಲ.
ಅಲ್ಲದೆ, ಎನ್.ಐ.ಎ, ಸಿಬಿಐ, ಇಡಿ ಅಥವಾ ಇತರ ಕೇಂದ್ರ ತನಿಖಾ ತಂಡ ತನಿಖೆ ಮಾಡುತ್ತಿರುವ ಪ್ರಕರಣಗಳ ಆರೋಪಿಗಳು, ಮರಣ ದಂಡನೆ ಮತ್ತು ಮರಣದವರೆಗಿನ ಜೀವಾವಧಿ ಶಿಕ್ಷೆಗೆ ಗುರಿಯಾದವರು ಕೂಡ ಪರೋಲ್ ಮೇಲೆ ಬಿಡುಗಡೆಯಾಗಲು ಅರ್ಹರಾಗುವುದಿಲ್ಲ.
ಓದಿ:ಸಿಎಂಗೂ ತಟ್ಟಿದ ಅರೆಸ್ಟ್ ಟೂ ಮಿ ಅಭಿಯಾನ : ಮುಖ್ಯಮಂತ್ರಿ ನಿವಾಸ ಬಳಿ ರಾತ್ರೋರಾತ್ರಿ ಪೋಸ್ಟರ್ ಅಂಟಿಸಿ ಆಕ್ರೋಶ