ಮಂಡ್ಯ:ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವನ ಸ್ಥಿತಿ ಗಂಭೀರವಾಗಿದೆ. ಜಿಲ್ಲೆಯ ನಾಗಮಂಗಲ ಹೊರವಲಯ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಎಂ.ಹೊಸೂರು ಗೇಟ್ ಸಮೀಪ ಶನಿವಾರ ರಾತ್ರಿ ಅಪಘಾತ ನಡೆದಿದೆ.
ನಾಗಮಂಗಲ ತಾಲೂಕಿನ ಬಿರೇಶ್ವರಪುರದ ದೇವರಾಜು, ಪಾಂಡವಪುರ ತಾಲೂಕಿನ ವದೆಸಮುದ್ರ ಗ್ರಾಮದ ಮಂಜುನಾಥ್ ಹಾಗೂ ವಿಳಾಸ ಪತ್ತೆಯಾಗದ ಮತ್ತೊಬ್ಬ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದ ಸ್ವಾಮಿ ಎಂಬುವವರು ತೀವ್ರವಾಗಿ ಗಾಯಗೊಂಡವರು.
ನಾಗಮಂಗಲ ಹೊರವಲಯದಲ್ಲಿ ಅಪಘಾತ ಮೃತ ದೇವರಾಜು ಅವರು ಪಾಂಡವಪುರ ತಾಲೂಕಿನ ಕೆನ್ನಾಳು ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಾಗೆಯೇ ಪಾಂಡವಪುರ ತಾಲೂಕಿನ ಕನಗನಮರಡಿ ವೃತ್ತದ ಗ್ರಾಮ ಸಹಾಯಕನಾಗಿ ಮಂಜುನಾಥ್ ಕರ್ತವ್ಯ ನಿರ್ವಹಿಸುತ್ತಿದ್ದರು. ಗಾಯಾಳು ಸ್ವಾಮಿ ಕೂಡ ಪಾಂಡವಪುರ ತಾಲೂಕಿನ ದಾಮರಹಳ್ಳಿ ವೃತ್ತದ ಗ್ರಾಮ ಸಹಾಯಕನಾಗಿದ್ದರು.
ಮೈಸೂರು ಕಡೆಯಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದೆ. ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಗಾಯಾಳು ಸ್ವಾಮಿಯನ್ನು ದಾಖಲಿಸಲಾಗಿದೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ 7 ಜನರ ದುರ್ಮರಣ