ಮೈಸೂರು :ಜಿಲ್ಲೆಯಾದ್ಯಂತ ಮಳೆಯಿಂದಾಗಿರುವ ಹಾನಿಯ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾಹಿತಿ ನೀಡಿದರು.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 7 ದಿನದಿಂದ ಶೇ.530ರಷ್ಟು ಮಳೆಯಾಗಿದೆ. ಕಳೆದ ನವೆಂಬರ್ನಲ್ಲಿ ಶೇ.230 ರಷ್ಟು ಮಳೆ ಆಗಿತ್ತು. ಮಳೆಯಿಂದ ಒಟ್ಟು 1994 ಮನೆಗಳಿಗೆ ಹಾನಿಯಾಗಿದೆ.
87 ಮನೆ ಸಂಪೂರ್ಣವಾಗಿ ಹಾನಿಯಾಗಿವೆ. 1907 ಮನೆಗಳಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. 3 ಮಂದಿ ಸಾವನ್ನಪ್ಪಿದ್ದಾರೆ. 500 ಹೆಕ್ಟೇರ್ ಬೆಳೆ ನಾಶವಾಗಿದೆ. 1100 ಕಿ.ಮೀ ನಗರ ಹಾಗೂ 500 ಕಿ.ಮೀ ಗ್ರಾಮೀಣ ಭಾಗದ ರಸ್ತೆಗೆ ಹಾನಿಯಾಗಿದೆ. 67 ಶಾಲೆಗಳು, 33 ಪಿಎಸ್ಸಿಎಸ್, 133 ಎಲೆಕ್ಟ್ರಿಕ್ ಪೋಸ್ಟ್ಗಳಿಗೆ ಹಾನಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಚಾಮುಂಡಿ ಬೆಟ್ಟದ ರಸ್ತೆ ಕುಸಿತ ಸರಿಪಡಿಸಲು 9.5 ಕೋಟಿ ರೂ. ಅಂದಾಜು ಮಾಡಲಾಗಿದೆ. ಇನ್ನು ಮಳೆ ನಿಂತಿಲ್ಲ. ಮಳೆ ನಿಂತು ಬಿಸಿಲು ಬಂದಾಗ ಅಂತಿಮವಾಗಿ ಎಸ್ಟಿಮೇಟ್ ಮಾಡಿ ಎಂದು ಮಾಹಿತಿ ನೀಡಿದ್ದೇವೆ. ಈಗಾಗಲೇ ಮಳೆ ಹಾನಿ ವರದಿಯನ್ನು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.
ವರ್ಚುಯಲ್ ಮೂಲಕ ಸಿಎಂ ಮಾಹಿತಿ ಸಂಗ್ರಹಿಸಿದ್ದಾರೆ. ನಾಳೆ ಸಿಎಂ ಕೊಡಗಿಗೆ ಬರಲಿದ್ದಾರೆ. ವೈಯುಕ್ತಿಕವಾಗಿ ಅವರಿಗೆ ಮಾಹಿತಿ ನೀಡಲಿದ್ದೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು.