ಮೈಸೂರು: ಹಾಲಿನ ಟ್ಯಾಂಕರ್ಗೆ ಕಾರು ಡಿಕ್ಕಿ ಹೊಡೆದು ಯುವತಿಯರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು-ಹುಣಸೂರು ಹೆದ್ದಾರಿಯ ರಂಗಯ್ಯನ ಕೊಪ್ಪಲು ಗೇಟ್ ಬಳಿ ನಡೆಯಿತು. ಮೈಸೂರಿನ ಚಂದ್ರಶೇಖರ್ ಅವರ ಪುತ್ರಿ 24 ವರ್ಷದ ಜೀವಿತಾ ಹಾಗೂ ಕೆ.ಪಿ.ಅಗ್ರಹಾರದ ಪ್ರಸನ್ನರವರ ಪುತ್ರಿ 24 ವರ್ಷದ ಪ್ರತಿಕ್ಷಾ ಮೃತರು.
ಇಬ್ಬರೂ ಸಾಫ್ಟ್ವೇರ್ ಇಂಜಿನಿಯರುಗಳಾಗಿದ್ದು, ವೀಕೆಂಡ್ ಕಾರಣಕ್ಕೆ ಝೂಮ್ ಕಂಪನಿಯ ಮಾರುತಿ ಕಾರಿನಲ್ಲಿ ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಮೂಲಕ ಹುಣಸೂರು ಕಡೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ಮುಂಬದಿಯ ಟೈರ್ ಪಂಚರ್ ಆಗಿ, ನಿಯಂತ್ರಣ ಸಿಗದೇ ಎದುರಿಗೆ ಬರುತ್ತಿದ್ದ ಹಾಲಿನ ಟ್ಯಾಂಕರ್ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಯುವತಿಯರಿಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.