ಮೈಸೂರು: ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ. ಅಗತ್ಯಬಿದ್ದರೆ 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ ಎಂದು ನೂತನ ಸಚಿವ ಆರ್.ಶಂಕರ್ ತಿಳಿಸಿದರು.
ಸುತ್ತೂರು ಶಾಖಾ ಮಠಕ್ಕೆ ಆರ್. ಶಂಕರ್ ಭೇಟಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಗುರು ಹೆಚ್. ವಿಶ್ವನಾಥ್, ಮುನಿರತ್ನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತೆ. ನನಗೆ ಯಾವುದೇ ಖಾತೆ ನೀಡಿದರು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಸಚಿವ ನಾಗೇಶ್‌ಗೆ ಸಂಪುಟ ದರ್ಜೆ ಸ್ಥಾನ ನೀಡಿರುವುದು ಸಮಾಧಾನ ತಂದಿದೆ. ಉಳಿದ ಇಬ್ಬರನ್ನು ಸಿಎಂ ಕೈ ಹಿಡಿಯುವ ವಿಶ್ವಾಸ ಇದೆ ಎಂದರು.
ಕುರುಬರ ಎಸ್‌ಟಿ ಮೀಸಲಾತಿ ಹೋರಾಟದ ವಿಚಾರ ಕುರಿತು ಮಾತನಾಡಿದ ಸಚಿವ ಶಂಕರ್, ಇದು ಯಾರ ವಿರುದ್ಧದ ಹೋರಾಟವಲ್ಲ, ಗಮನ ಸೆಳೆಯಲು ಹೋರಾಟ ಮಾಡುತ್ತಿದ್ದು, ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ನಾನು ಕುರುಬ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.
ಮೊದಲು ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ಈಗ ಕುರುಬ ಸಮುದಾಯದ ನಾಲ್ಕು ಜನ ಸಚಿವರಿದ್ದೇವೆ. ಕ್ಯಾಬಿನೆಟ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ ಎಂದರು.
ನಂಜುಂಡೇಶ್ವರ ದೇವಾಲಯ, ಸುತ್ತೂರು ಶಾಖಾ ಮಠಕ್ಕೆ ಭೇಟಿ: ನೂತನ ಸಚಿವರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಮೊದಲು ನಂಜುಂಡೇಶ್ವರನ ದರ್ಶನ ಪಡೆದ ಆರ್.ಶಂಕರ್, ನಂತರ ಸುತ್ತೂರು ಮಠಕ್ಕೆ ಪತ್ನಿ ಧನಲಕ್ಷ್ಮಿ ಮತ್ತು ಮಗನ ಜೊತೆ ಆಗಮಿಸಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು.