ಮೈಸೂರು/ಮಂಡ್ಯ: ಲಾರಿ ಅಥವಾ ಟ್ರ್ಯಾಕ್ಟರ್ನಲ್ಲಿ ಹೆಚ್ಚೆಂದರೆ 12 ಟನ್ ಕಬ್ಬು ತುಂಬಲು ಸಾಧ್ಯ. ಆದರೆ, ಶ್ರೀವಿನಾಯಕ ಯುವಕರ ಬಳಗದ ಯುವಕರು ಎತ್ತಿನಗಾಡಿಗೆ ಬರೋಬ್ಬರಿ 14.55 ಟನ್ ಕಬ್ಬು ತುಂಬಿ 3 ಕಿಲೋಮೀಟರ್ ಸಾಗಿಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.
ಮಂಡ್ಯ ತಾಲೂಕಿನ ಎಚ್.ಮಲ್ಲಿಗರೆ ಈ ಘಟನೆ ನಡೆದಿದ್ದು, ಮಲ್ಲಿಗೆರೆ ಫಾರ್ಮ್ ಬಳಿಯ ಜಮೀನಿನಿಂದ ಜೀಗುಂಗಿಪಟ್ಟಣದ ಗೇಟ್ ಬಳಿಯ ವೇಬ್ರಿಡ್ಜ್ ವರೆಗೆ 3ಕಿಮೀವರೆಗೂ ಕಬ್ಬು ತುಂಬಿದ ಎತ್ತಿನಗಾಡಿ ಎತ್ತುಗಳು ಎಳೆದುಕೊಂಡು ಬಂದಿದೆ. ಅದನ್ನು ನೋಡಲು ಇಡೀ ಗ್ರಾಮಸ್ಥರೇ ಅಲ್ಲಿದ್ದರು.
ಎತ್ತಿನಗಾಡಿ ನಡೆಸುತ್ತಿದ್ದ ಯುವಕ ರಂಜುಗೆ ಪ್ರೋತ್ಸಾಹ ತುಂಬುತ್ತಿದ್ದರು. ಈ ಹಿಂದೆ ಮದ್ದೂರಿನ ಭಾರತ ನಗರದಲ್ಲಿ 10 ಟನ್ ಕಬ್ಬು ತುಂಬಿ ಎಳೆಸಿದ್ದು ಹಳೆಯ ದಾಖಲೆಯಾಗಿತ್ತು. ಸಾಮಾನ್ಯವಾಗಿ ಎತ್ತಿನಗಾಡಿಗೆ 2.5 - 3 ಟನ್ವರೆಗೂ ಕಬ್ಬು ತುಂಬುವುದು ಸಾಮಾನ್ಯ. ಆದರೆ, 14.55 ಟನ್ ಕಬ್ಬು ತುಂಬಿದ್ದು ಸಾಧನೆಯಾಗಿದೆ.
14.55 ಟನ್ ಕಬ್ಬು ತುಂಬಿರುವ ಎತ್ತಿನಗಾಡಿ ಕೇವಲ ಮನರಂಜನೆಗಾಗಿ ಈ ರೀತಿ ಮಾಡಲಾಗಿದೆ. ಚಾಲೆಂಜ್ ಹಾಗೂ ದಾಖಲೆಗಾಗಿ ಅಲ್ಲ. ಈ ಸಂದರ್ಭದಲ್ಲಿ ಎತ್ತುಗಳಿಗೆ ಯಾವುದೇ ಹಿಂಸೆ ನೀಡಿಲ್ಲ. ಅವುಗಳನ್ನು ಪ್ರೀತಿಯಿಂದ ಸಾಕಿದ್ದೇನೆ ಎನ್ನುತ್ತಾರೆ ಮಾಲೀಕ ರಂಜು. ಹೆಚ್ಚು ಭಾರ ಎಳೆಸುವ ಮೂಲಕ ಎತ್ತುಗಳಿಗೆ ಹಿಂಸೆ ನೀಡಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.