ಮೈಸೂರು: ಜುಬಿಲಂಟ್ ಕಾರ್ಖಾನೆಯ ಮೊದಲ ಸೋಂಕಿತನಿಂದ ಇಂದು 11 ಜನರಿಗೆ ಸೋಂಕು ಹರಡಿದೆ. ಈತನಿಗೆ ಸೋಂಕು ಎಲ್ಲಿಂದ ಬಂತು ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಜುಬಿಲಂಟ್ ಕಂಪನಿಯ ಮೊದಲ ಸೋಂಕಿತನ ಸುತ್ತ ಅನುಮಾನದ ಹುತ್ತ ಕೊರೊನಾ ಸೋಂಕಿತರ ಹಾಟ್ ಸ್ಪಾಟ್ ಆಗಿರುವ ಜುಬಿಲಂಟ್ ಕಾರ್ಖಾನೆಯ ಮೊದಲ ಸೋಂಕಿತ ಪಿ.52 ರ ಸಂಪರ್ಕದಲ್ಲಿದ್ದ 11 ಜನರಿಗೆ ಇಂದು ಕೊರೊನಾ ಪಾಸಿಟಿವ್ ಬಂದಿದೆ. ಈತ ಜುಬಿಲಂಟ್ ಕಾರ್ಖಾನೆಯಲ್ಲಿ ನೌಕರನಾಗಿದ್ದು, ಈತನ ಟ್ರಾವೆಲ್ ಹಿಸ್ಟರಿಯನ್ನು ನೋಡಿದರೆ ಈತ ಎಲ್ಲೂ ವಿದೇಶಿ ಪ್ರವಾಸ ಮಾಡಿಲ್ಲ. ಆದರೂ ಈತನ ಸಂಪರ್ಕದಲ್ಲಿ ಇದ್ದವರಿಗೆಲ್ಲಾ ಬಹುತೇಕ ಪಾಸಿಟಿವ್ ಬಂದಿದ್ದು, ಈಗ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಈ ಮೊದಲ ಸೋಂಕಿತ ಪಿ.52 ಈಗಾಗಲೇ ಗುಣಮುಖನಾಗಿದ್ದು, ಆದರೆ ಮನೆಗೆ ಹೋಗದೆ ಜಿಲ್ಲಾಡಳಿತದ ವಿಶೇಷ ಕ್ವಾರಂಟೈನ್ ನಲ್ಲಿ ಇದ್ದಾನೆ.
ಈತನ ಬಗ್ಗೆ ಶಾಸಕರು ಹೇಳಿದ್ದೇನು.. ?
ಜುಬಿಲಂಟ್ ಜನರಿಕ್ ಫಾರ್ಮಾಸಿಟಿಕಲ್ ಕಂಪನಿಯ ಮೊದಲ ಸೋಂಕಿತ ವ್ಯಕ್ತಿ ಮೊದಲು ತನಗೆ ಹುಷಾರು ಇಲ್ಲ ಎಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದ. ಅಲ್ಲಿಂದ ಕೆ.ಆರ್ ಆಸ್ಪತ್ರೆಗೆ ಹೋದ ಮೇಲೆ ಅಲ್ಲಿ ಕೊರೊನಾ ಇರುವುದು ದೃಢಪಟ್ಟ ನಂತರ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ಆದರೆ ಆ ಸಂದರ್ಭದಲ್ಲಿ ಕಾರ್ಖಾನೆಗೆ ವಿದೇಶದಿಂದ ಜನ ಬಂದು ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಂಪನಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿಲ್ಲ ಎನ್ನಲಾಗ್ತಿದೆ. ಜುಬಿಲಂಟ್ ಕಂಪನಿಯ ದೆಹಲಿ ಶಾಖೆಯ ಎಕ್ಸಿಕ್ಯೂಟಿವ್ಗಳು ಮೈಸೂರಿಗೆ ಬಂದಿದ್ದರು. ಈ ಮೊದಲ ಸೋಂಕಿತ ಪಿ.52ರ ಜೊತೆಗಿನ ಸಂಪರ್ಕ ಮಾಡಿದ್ದಾರೆ.
ಎಕ್ಸಿಕ್ಯೂಟ್ ಗಳು ವಾಪಸ್ ದೆಹಲಿಗೆ ಹೋದ ಮೇಲೆ ಮೊದಲ ಸೋಂಕಿತ ಕಂಪನಿಯ ಇತರ ನೌಕರರ ಜೊತೆ ಸಂಪರ್ಕ ಮಾಡಿದ್ದಾನೆ. ಆದ್ದರಿಂದ ಈ ಕಂಪನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈಗ ನಮಗೆ ಗೊತ್ತಾಗಬೇಕಿರುವುದು ಮೊದಲ ಸೋಂಕಿತನ ಸಂಪರ್ಕ ಯಾರ ಜೊತೆ ಇತ್ತು ಎಂಬುದು ತನಿಖೆಯಾಗಬೇಕು. ಇದು ಜುಬಿಲಂಟ್ ಕಾರ್ಖಾನೆಯವರಿಗೆ ಗೊತ್ತಿದೆ. ಅವರು ಯಾಕೆ ಮುಚ್ಚಿಹಾಕುತ್ತಿದ್ದಾರೆ ಅನ್ನೋದು ತಿಳಿಯುತ್ತಿಲ್ಲವೆಂದು ಸ್ಥಳೀಯ ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.