ಬಂಟ್ವಾಳ (ದ.ಕ): ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನಕ್ಕೆ ಪಾದರಕ್ಷೆ ಧರಿಸಿಯೇ ಒಳ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುಂಜಾಲಕಟ್ಟೆ ಎಸ್ಐ ಸೌಮ್ಯಾ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಬುಶೇರ್ ರೆಹಮಾನ್ (20), ಇಸ್ಮಾಯಿಲ್ ಅರ್ಹ ಮಾಜ್ (22), ಮಹಮ್ಮದ್ ತಾನಿಶ್ (19), ಮೊಹಮ್ಮದ್ ರಶಾದ್(19) ಬಂಧಿತರು. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನಕ್ಕೆ ಆರೋಪಿಗಳು ಚಪ್ಪಲಿ ಧರಿಸಿಕೊಂಡು ಪ್ರವೇಶ ಮಾಡಿ, ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟು ಮಾಡಿದ್ದರು. ಅಲ್ಲದೆ ಅದರ ವಿಡಿಯೋವನ್ನು ಹರಿಬಿಟ್ಟಿದ್ದರು. ಅ. 10ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು.
ದೇವಸ್ಥಾನ ಪೂಜಾ ಸ್ಥಳವೆಂದು ಗೊತ್ತಿದ್ದರೂ, ಚಪ್ಪಲಿ ಧರಿಸಿಕೊಂಡು ಪ್ರವೇಶ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಮಾಡಿ ವಿಡಿಯೋ ಹರಿಬಿಟ್ಟ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿಡಿಯೋ ಹೊರಬರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾದವು.
ಆರೋಪಿಗಳನ್ನು ಮೂರು ದಿನದೊಳಗೆ ಬಂಧಿಸದಿದ್ದರೆ, ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಹಿಂದೂ ಜಾಗರಣಾ ವೇದಿಕೆ ನೀಡಿತ್ತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸುದ್ದಿ ತಿಳಿಯುತ್ತಿದ್ದಂತೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದರು.
ಸಂಬಂಧಿತ ವರದಿ:ಚಪ್ಪಲಿ ಹಾಕಿಕೊಂಡೇ ಯುವಕರ ದೇವಾಲಯ ಪ್ರವೇಶ ಆರೋಪ.. ವಿಡಿಯೋ ವೈರಲ್ ಆದ ಬಳಿಕ ಕ್ರಮಕ್ಕೆ ಆಗ್ರಹ