ಸುಬ್ರಹ್ಮಣ್ಯ(ದಕ್ಷಿಣ ಕನ್ನಡ) :ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದು ಕಣ್ಮರೆಯಾದ ಘಟನೆ ಕುಮಾರಧಾರ ಸ್ನಾನಘಟ್ಟದ ಬಳಿ ನಡೆದಿದೆ. ಮಂಡ್ಯ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಖಾಸಗಿ ಕಂಪನಿ ಉದ್ಯೋಗಿ ಶಿವು(25) ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿರುವ ಯುವಕ.
ಶಿವು ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರು ದೀಪಾಂಜಲಿ ನಗರದಲ್ಲಿ ವಾಸಿಸುತ್ತಿದ್ದರು ಎನ್ನಲಾಗ್ತಿದೆ. ಸುಮಾರು 21 ಜನ ಗೆಳೆಯರ ತಂಡ ವಿವಿಧ ಕ್ಷೇತ್ರಗಳ ಭೇಟಿಗೆ ಬಂದಿದ್ದು, ಕುಕ್ಕೆಗೂ ಆಗಮಿಸಿ ಇಲ್ಲಿನ ಕುಮಾರಧಾರ ಸ್ನಾನಘಟ್ಟಕ್ಕೂ ಆಗಮಿಸಿದ್ದರು. ಈ ವೇಳೆ ನದಿಗೆ ಇಳಿಯದಂತೆ ಸ್ನೇಹಿತರು ಸೂಚಿಸಿದರೂ ನದಿ ಬಳಿ ಕಟ್ಟಿರುವ ತಡೆಹಗ್ಗ ದಾಟಿ ಶಿವು ನದಿ ನೀರಿಗೆ ಇಳಿದಿದ್ದಾರೆ ಎಂದು ಅವರ ಸ್ನೇಹಿತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.