ಮಂಗಳೂರು: ಕೆಲ ತಿಂಗಳ ಹಿಂದೆ ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಯಲ್ಲಿದ್ದ ಆಡಿನ ಮರಿಯನ್ನು ರಕ್ಷಣೆ ಮಾಡಲು ಹೋಗಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದ ಯುವಕನೋರ್ವ ಮಾನಸಿಕವಾಗಿ ಕುಗ್ಗಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಜೋಕಟ್ಟೆ ನಿವಾಸಿ ಚೇತನ್(21) ಮೃತಪಟ್ಟ ಯುವಕ. ಬಡ ಕುಟುಂಬದ ಚೇತನ್ ಖಾಸಗಿ ಬಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 2021 ಆಗಸ್ಟ್ 28ರ ಬೆಳಗ್ಗೆ ಮನೆಯಿಂದ ಹೊರಟ ಚೇತನ್ ರೈಲ್ವೆ ಹಳಿಯ ಬಳಿಯಲ್ಲಿ ಬರುವಾಗ ಆಡಿನ ಮರಿಯೊಂದು ಹಳಿಯಲ್ಲಿ ಸಿಲುಕಿಕೊಂಡಿತ್ತು. ಆಡು ಮರಿ ಹಳಿಯಿಂದ ತನ್ನ ಕಾಲನ್ನು ಬಿಡಿಸಿಕೊಳ್ಳಲು ಒದ್ದಾಡುತ್ತಿತ್ತು. ಅಷ್ಟರಲ್ಲಾಗಲೇ ಅದೇ ಹಳಿಯಲ್ಲಿ ವೇಗವಾಗಿ ರೈಲು ಬಂದಿತ್ತು.
(ಇದನ್ನೂ ಓದಿ: ರೈಲಿನಡಿ ಸಿಲುಕುತ್ತಿದ್ದ ಮೇಕೆ ಮರಿ ಉಳಿಸಲು ಹೋಗಿ ಕಾಲನ್ನೇ ಕಳೆದುಕೊಂಡ ಯುವಕ)
ತಕ್ಷಣ ಆಡಿನ ಸಹಾಯಕ್ಕೆ ಧುಮುಕಿದ ಚೇತನ್ ಆಡು ಮರಿಯನ್ನು ರಕ್ಷಣೆ ಮಾಡಿದ್ದರು. ಆದರೆ ದುರದೃಷ್ಟವಶಾತ್, ರೈಲು ಚೇತನ್ ಕಾಲಿನ ಮೇಲೆಯೇ ಹರಿದಿದೆ. ಪರಿಣಾಮ ಚೇತನ್ ಅವರ ಕಾಲುಗಳು ದೇಹದಿಂದ ಬೇರ್ಪಟ್ಟು ಛಿದ್ರ ಛಿದ್ರವಾಗಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಅವರನ್ನು ಮಂಗಳೂರಿನ ಎಜೆ ಆಸ್ವತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಚೇತರಿಸಿಕೊಂಡ ಚೇತನ್ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತಂದಿದ್ದರು. ಆದರೆ ಮಾನಸಿಕವಾಗಿ ಕುಗ್ಗಿದ ಚೇತನ್ ಸರಿಯಾಗಿ ಊಟ ಮಾಡದೆ ಮತ್ತೆ ಆಸ್ಪತ್ರೆಗೆ ದಾಖಲಾಗಿ ಭಾನುವಾರ ಸಾವನ್ನಪ್ಪಿದ್ದಾರೆ.
(ಇದನ್ನೂ ಓದಿ: ವಿಧಾನಸೌಧದಲ್ಲಿ ರಕ್ತ ಹೀರುವ ರಾಕ್ಷಸರು: ಸಿದ್ದರಾಮಯ್ಯ ಕಿಡಿ)