ಕರ್ನಾಟಕ

karnataka

ETV Bharat / city

ಕರಾವಳಿಯಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

ಯಕ್ಷಗಾನದ ತವರೂರು ಕರಾವಳಿಯಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಆರಂಭಗೊಂಡಿವೆ.

yakshagana performance begins in coastal areas
ಕರಾವಳಿಯಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

By

Published : Nov 30, 2021, 11:57 AM IST

ಮಂಗಳೂರು: ನವೆಂಬರ್ ತಿಂಗಳ ಬಳಿಕ ಮೇ ಅಂತ್ಯದವರೆಗೆ ಕರಾವಳಿಯ ರಾತ್ರಿಗಳು ಯಕ್ಷರಾತ್ರಿಗಳಾಗುತ್ತದೆ‌. ಎಲ್ಲಿ ನೋಡಿದರೂ ಚಂಡೆ - ಮದ್ದಳೆ - ಚಕ್ರತ್ರಾಳಗಳ ನಿನಾದ, ಭಾಗವತರ ಏರು ಧ್ವನಿಯ ಪದ್ಯವು ನೀರವ ರಾತ್ರಿಯಲ್ಲಿ ದೂರದವರೆಗೂ ಕೇಳಿಸಲಿದೆ. ರಾತ್ರಿಯ ಕತ್ತಲಿನಲ್ಲಿ ಬೆಳಕಿನ ರಂಗು ಮೂಡುತ್ತದೆ. ಪುರಾಣಲೋಕದ ಪಾತ್ರಗಳೆಲ್ಲವೂ ಪ್ರತ್ಯಕ್ಷವಾಗಲಿದೆ.

ಕರಾವಳಿಯಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

ಯಕ್ಷಗಾನದ ತವರೂರು ಕರಾವಳಿಯಲ್ಲಿ ಅಂದರೆ ಗಡಿಜಿಲ್ಲೆಯಾದ ಕಾಸರಗೋಡಿನಿಂದ ದಕ್ಷಿಣ ಕನ್ನಡ, ಉಡುಪಿಯಿಂದ ಹಿಡಿದು ಉತ್ತರ ಕನ್ನಡ ಜಿಲ್ಲೆಯವರೆಗೂ ಯಕ್ಷಗಾನದ ವ್ಯಾಪ್ತಿಯಿದೆ. ಯಕ್ಷಗಾನ ಈಗಲೂ ತನ್ನದೇ ಆದ ಪ್ರೇಕ್ಷಕರ ಬಳಗವನ್ನು ಹೊಂದಿದೆ. ರೂಪಾಂತರಿ ಕೊರೊನಾ ಭೀತಿಯ ನಡುವೆಯೂ ಎಲ್ಲ ಯಕ್ಷಗಾನ ತಂಡಗಳು ತಮ್ಮ ತಿರುಗಾಟವನ್ನು ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಕೆಲ ಮೇಳಗಳು ತಿರುಗಾಟ ಆರಂಭಿಸಿವೆ.

6 ಮೇಳಗಳಿಂದ ತಿರುಗಾಟ ಆರಂಭ

ನಿನ್ನೆ ತೆಂಕುತಿಟ್ಟಿನ ಪ್ರಸಿದ್ಧ ಹರಕೆಯಾಟದ ಯಕ್ಷಗಾನ ಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳು ತನ್ನ ತಿರುಗಾಟವನ್ನು ಆರಂಭಿಸಿದೆ. ದೇವರ ಸೇವೆಯಾಟವೆಂದು ದೇವಸ್ಥಾನದಲ್ಲಿ ಆರೂ ರಂಗಸ್ಥಳದಲ್ಲಿ ಏಕಕಾಲದಲ್ಲಿ ಯಕ್ಷಗಾನ ಸೇವೆಯಾಟ ಜರುಗಿತು. ಇಂದಿನಿಂದ ಭಕ್ತರು ಸೇವೆ ನೀಡುವಲ್ಲಿಗೆ ಹೋಗಿ ಯಕ್ಷಗಾನ ಪ್ರಸಂಗವನ್ನು ಕಲಾವಿದರು ಆಡಿ ತೋರಿಸುತ್ತಾರೆ.

ಯಕ್ಷಗಾನ ಹರಕೆಯಾಟ 'ಯಕ್ಷಗಾನ ಪ್ರಿಯೆ' ಕಟೀಲು ಶ್ರೀ ದುರ್ಗೆಗೆ ಅತಿ ಪ್ರಿಯವಾದದು ಹಾಗೆಯೇ ದೊಡ್ಡ ಸೇವೆಯೂ ಆಗಿದೆ. ಆದ್ದರಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ತಾಯಿಗೆ ಯಕ್ಷಗಾನ ಸೇವೆ ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿಗೆ ಸಾಕ್ಷಾತ್ ಕಟೀಲು ಶ್ರೀ ದೇವಿಯೇ ಬರುತ್ತಾಳೆಂಬ ಪ್ರತೀತಿ ಈಗಲೂ ಇದೆ.

ಕಾರ್ತಿಕ ಪಂಚಮಿಯಂದು ಕಟೀಲು ದೀಪೋತ್ಸವ ನಡೆಯುತ್ತದೆ. ಬಳಿಕ ದೇವರ ತಾರಾನುಕೂಲದ ದಿನದಂದು ದೇವಸ್ಥಾನದ ಯಕ್ಷಗಾನ ಮೇಳಗಳ ತಿರುಗಾಟವನ್ನು ನಡೆಸಲಾಗುತ್ತದೆ. ವೃಷಭ ಸಂಕ್ರಮಣದ ಬಳಿಕ 11 ನೇ ದಿನದಂದು (ಮೇ 25 ರ ಸುಮಾರಿಗೆ) ವರ್ಷದ ತಿರುಗಾಟ (ಜೈತ್ರಯಾತ್ರೆ) ಮುಕ್ತಾಯವಾಗುತ್ತದೆ.

ದೇವಿ ಸಮ್ಮುಖದಲ್ಲಿ ಕುಣಿದ ಕಲಾವಿದರು

ಯಕ್ಷಗಾನ ತಿರುಗಾಟ ಆರಂಭದ ದಿನವಾದ ನಿನ್ನೆ ಕಲಾವಿದರು ಶ್ರೀದೇವಿಯ ಸಮ್ಮುಖದಲ್ಲಿಯೇ ಗಜ್ಜೆಕಟ್ಟಿ ಕುಣಿದರು. ಬಳಿಕ ಕಲಾವಿದರು ದೇವಸ್ಥಾನದ ಪ್ರಾಂಗಣದಲ್ಲಿ ಹಾಕಲಾಗುವ ಆರೂ ರಂಗಸ್ಥಳಗಳಲ್ಲಿ ಪೂರ್ವರಂಗ ಕುಣಿತವನ್ನು ಪ್ರದರ್ಶಿಸಿ 'ಪಾಂಡವಾಶ್ವಮೇಧ' ಪ್ರಸಂಗವನ್ನು ಪ್ರದರ್ಶಿಸಿದರು. ನಾಳೆಯಿಂದ ಆರು ಮೇಳಗಳು ತಿರುಗಾಟವನ್ನು ಆರಂಭಿಸಿ, ಮುಂದಿನ ಆರು ತಿಂಗಳ ಕಾಲ ವಿವಿಧ ಕಡೆಗಳಲ್ಲಿ ಯಕ್ಷಗಾನ ಹರಕೆಯಾಟ ಸೇವೆ ನಡೆಯುತ್ತದೆ.

ಈಗಾಗಲೇ ಹಟ್ಟಿಯಂಗಡಿ, ಮಂದಾರ್ತಿ, ಬಪ್ಪನಾಡು, ಪಾವಂಜೆ ಮೇಳಗಳು ತಿರುಗಾಟ ಆರಂಭಿಸಿದೆ. ಧರ್ಮಸ್ಥಳ ಮೇಳವು ಒಂದು ತಿಂಗಳ ಕಾಲ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಯೇ ಪ್ರದರ್ಶನ ನೀಡಲಿದೆ. ಡಿಸೆಂಬರ್ 5ರ ಬಳಿಕ ತಿರುಗಾಟ ಆರಂಭಿಸಲಿದೆ‌.

ಇದನ್ನೂ ಓದಿ:ಟೀಕೆಗಳಿಗೆ ಕಿವಿಗೊಡದೇ ಮುಂದುವರಿಯಿರಿ: ಡಾ. ವೀರೇಂದ್ರ ಹೆಗ್ಗಡೆ

ಅದೇ ರೀತಿ ತೆಂಕಿನ ಗಜಮೇಳವಾದ ಹನುಮಗಿರಿ, ತುಳು ಪ್ರಸಂಗಗಳನ್ನು ಪ್ರದರ್ಶಿಸುವ ಸುಂಕದಕಟ್ಟೆ, ಸಸಿಹಿತ್ಲು, ಮಂಗಳಾದೇವಿ, ದೇಂತಡ್ಕ ಮೇಳಗಳು ತಿರುಗಾಟಕ್ಕೆ ಸಜ್ಜಾಗುತ್ತಿವೆ. ಬಡಗಿನ ಟೆಂಟ್ ಮೇಳಗಳಾದ ಪೆರ್ಡೂರು, ಸಾಲಿಗ್ರಾಮ ಮೇಳಗಳು ಹೊಸ ಪ್ರಸಂಗಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದು, ಉಳಿದಂತೆ ಬಡಗಿನ ಕಮಲಶಿಲೆ, ಗೋಳಿಗರಡಿ, ಸೌಕೂರು ಮುಂತಾದ ಮೇಳಗಳು ತಿರುಗಾಟಕ್ಕೆ ಅಣಿಯಾಗುತ್ತಿದೆ‌.

ABOUT THE AUTHOR

...view details