ಮಂಗಳೂರು:ವಿದ್ಯಾಪೇಕ್ಷೆಯಿಂದ ಮನೆಗೆ ಬಂದ ನೂರಾರು ವಿದ್ಯಾರ್ಥಿಗಳಿಗೆ ಮಲಗಿದಲ್ಲಿಂದಲೇ ಉಚಿತವಾಗಿ ಪಾಠ ಮಾಡಿದ್ದ ಮಹಾನ್ ಯಕ್ಷಗುರು, ಛಾಂದಸ ಪ್ರತಿಭೆ ಗಣೇಶ ಕೊಲೆಕಾಡಿ. ಸದ್ಯ ಅವರ ದೇಹ ಸ್ಥಿತಿಯು 3-4 ತಿಂಗಳಿನಿಂದ ಮತ್ತಷ್ಟು ಕ್ಷೀಣಿಸಿದ್ದು, ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದ್ದಾರೆ. ಅವರ ವೈದ್ಯಕೀಯ ವೆಚ್ಚ, ಮನೆಯ ಖರ್ಚು ಸೇರಿ ತಿಂಗಳಿಗೆ 40 ಸಾವಿರ ರೂ. ಅಗತ್ಯವಿದ್ದು, ಯಾವುದೇ ಆದಾಯ ಮೂಲ ಇಲ್ಲದಿರುವುದರಿಂದ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
18 ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹಲ್ಲೆ:
ಯಕ್ಷಗಾನ ಕ್ಷೇತ್ರದಲ್ಲಿಯೇ ಪ್ರಾಜ್ಞಗುರುವೆಂದು, ಕ್ಲಿಷ್ಟ, ಸಂಕೀರ್ಣ ಛಂದಸ್ಸಿನಲ್ಲಿಯೂ ಲೀಲಾಜಾಲವಾಗಿ ಪದ್ಯರಚನೆ ಮಾಡುವವರೆಂದು ವಿದ್ವಜ್ಜನರಿಂದಲೇ ಕೊಂಡಾಡಲ್ಪಟ್ಟ ಗುರು ಗಣೇಶ ಕೊಲೆಕಾಡಿಯವರು, 18 ವರ್ಷಗಳ ಹಿಂದೆ ಕಾರ್ಯ ನಿಮಿತ್ತ ಮುಂಬೈಗೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿಗೊಳಗಾಗಿ ಸಂಪೂರ್ಣ ಹಾಸಿಗೆ ಹಿಡಿಯುವಂತಾಗಿದ್ದರು.
ತಲೆಯ ಹಿಂಭಾಗಕ್ಕೂ ಬಿದ್ದ ಏಟಿನಿಂದ ಈ ಸ್ಥಿತಿ:
ಅವರೇ ಹೇಳುವ ಪ್ರಕಾರ 'ಮುಂಬೈಗೆ ಹೋಗುವ ಸಂದರ್ಭ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಯಾರೋ ನಾಲ್ಕೈದು ಮಂದಿ ದುಷ್ಕರ್ಮಿಗಳು ತನ್ನ ಮೇಲೆ ದಾಳಿ ನಡೆಸಿ, ಇರುವುದನ್ನೆಲ್ಲ ದೋಚಿದ್ದರು. ಅಷ್ಟೇ ಅಲ್ಲದೆ ಎರಡು ಕೈಗಳು, ಎರಡೂ ಕಾಲುಗಳು ನಿಷ್ಕ್ರಿಯ ಆಗುವಂತೆ ಹೊಡೆದಿದ್ದಾರೆ. ಅಲ್ಲದೆ ಅದೇ ಸಮಯ ತಲೆಯ ಹಿಂಭಾಗಕ್ಕೂ ಬಿದ್ದ ಏಟಿನಿಂದ ಮತ್ತಷ್ಟು ಘಾಸಿಯಾಗಿ ಈ ಸ್ಥಿತಿಗೆ ತಲುಪಿದ್ದೇನೆ' ಎನ್ನುತ್ತಾರೆ.
ಈವರೆಗೆ 70 ಲಕ್ಷ ರೂ. ಖರ್ಚು:
ಆ ಕಾಲಕ್ಕೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಗುರು ಗಣೇಶ ಕೊಲೆಕಾಡಿಯವರು ಸಂಪೂರ್ಣ ಹಾಸಿಗೆ ಹಿಡಿಯುವಂತಾದದ್ದು ಮಾತ್ರ ವಿಪರ್ಯಾಸ. ಅಲ್ಲಿಂದ ಇಲ್ಲಿಯವರೆಗೆ ಅವರಿಗೆ ಆಸ್ಪತ್ರೆ ವೆಚ್ಚ, ವೈದ್ಯಕೀಯ ಸೌಲಭ್ಯ ಸೇರಿ ಸುಮಾರು 70 ಲಕ್ಷ ರೂ. ಖರ್ಚಾಗಿದೆ. ಇದೆಲ್ಲವನ್ನು ದಾನಿಗಳು, ಅಭಿಮಾನಿಗಳು, ಶಿಷ್ಯರ ನೆರವಿನಿಂದ ಪೂರೈಸಲಾಗಿದೆ.
ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿಯಿಂದ ಆರ್ಥಿಕ ನೆರವು
ದೈಹಿಕವಾಗಿ ನಡೆದ ಆಘಾತದಿಂದ ಯಾವೊಂದು ಕೆಲಸ ಮಾಡಲಾಗದ ಅವರು ಆದಾಯದ ಮೂಲವಿಲ್ಲದೇ ತಾಯಿಯೊಂದಿಗೆ ಶೋಚನೀಯವಾಗಿ ಜೀವನ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಉಡುಪಿ ಯಕ್ಷಗಾನ ಕಲಾರಂಗವು ಉಳಿದುಕೊಳ್ಳಲು ಮನೆಯೊಂದನ್ನು ಕಟ್ಟಿಕೊಟ್ಟಿದೆ. ಇವರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಒಂದು ಹೊತ್ತಿನ ಅನ್ನವನ್ನೂ ಬೇಯಿಸಲು ಅಸಾಧ್ಯವಾಗಿದ್ದು, ಪಾವಂಜೆಯ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಊಟಕ್ಕಾಗಿ ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿದೆ.