ಮಂಗಳೂರು: ಗಲಭೆಯ ವಾಸ್ತವಿಕ ಸ್ಥಿತಿಗತಿ ಕುರಿತು ನಮ್ಮ ಅಧಿಕಾರಿಗಳು ದಾಖಲೆಗಳೊಂದಿಗೆ ವರದಿ ಬಿಡುಗಡೆ ಮಾಡಲಿದ್ದಾರೆ. ಇದರಲ್ಲಿ ಯಾರ ಕೈವಾಡವಿದೆ ಎಂದು ಸ್ಪಷ್ಟವಾಗಿರುವುದರಿಂದ ಇದೊಂದು ವ್ಯವಸ್ಥಿತ ಪಿತೂರಿ ಮತ್ತು ಷಡ್ಯಂತ್ರ ಎಂಬುದು ಸ್ಪಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಚ್ಚಲು ಪ್ರಯತ್ನ ಪಟ್ಟವರನ್ನು ಮತ್ತು ಗಾಡಿಗಳಲ್ಲಿ ಕಲ್ಲು ತಂದು ತೂರಾಟಕ್ಕೆ ವ್ಯವಸ್ಥೆ ಮಾಡಿದವರನ್ನು ಬಿಡೋಲ್ಲ. ಯಾರೆಲ್ಲಾ ಈ ಘಟನೆಯಲ್ಲಿ ಶಾಮೀಲಾಗಿದ್ದಾರೆ, ಅದರ ಹಿಂದಿರುವ ಉದ್ದೇಶ, ಹಿನ್ನೆಲೆ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತೇವೆ. ಅಲ್ಲದೆ ಅವರನ್ನು ಬಂಧಿಸಿ, ಕಾನೂನು ಕ್ರಮಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.
ಮಂಗಳೂರು ಹಿಂಸಾಚಾರ ಕುರಿತು ಸಿಎಂ ಹೇಳಿಕೆ ಕೇರಳದಲ್ಲಿ ಕೆಲವರು ಸ್ವಲ್ಪ ಗೊಂದಲ ಉಂಟುಮಾಡಲು ಪ್ರಯತ್ನಿಸಿದರು, ನಾನು ಅಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ, ಅದನ್ನೆಲ್ಲಾ ಟೀಕೆ ಮಾಡಲು ಹೋಗೋದಿಲ್ಲ. ಮಂಗಳೂರು ಘಟನೆಗೂ ಕೇರಳಕ್ಕೂ ಸಂಬಂಧ ಇದೆ ಎಂದು ನಾನು ಎಲ್ಲೂ ಹೇಳಿಲ್ಲ. ಇದರಲ್ಲಿ ಯಾರು ಭಾಗವಹಿಸಿದರು? ಅವರು ಎಲ್ಲಿಂದ ಬಂದವರು? ಎಂಬುದರ ಸತ್ಯಾಂಶದ ಬಗ್ಗೆ ತನಿಖೆಯಾಗಿ ಆರೋಪಿಗಳ ಬಂಧನವಾಗಲಿ ಎಂದು ಹೇಳಿದರು.
ಮಂಗಳೂರು ಘಟನೆಗೆ ಸಿಎಂ ಹಾಗೂ ಗೃಹಮಂತ್ರಿ ಕಾರಣ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಲ್ಪ ತಲೆ ಸರಿ ಇಲ್ಲದವರು ಈ ರೀತಿ ಹೇಳುತ್ತಾರೆ. ಪಾಪ ಅವರಿಗೆ ಹೇಳುವುದಕ್ಕೆ ಏನೂ ವಿಷಯ ಇಲ್ಲದ್ದರಿಂದ ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಬಿಡುಗಡೆಯಾಗಿರುವ ವೀಡಿಯೋಗಳನ್ನು ನೋಡಿಯಾದರೂ ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಲಿ ಎಂದು ವಿನಂತಿ ಮಾಡುತ್ತೇನೆ ಎಂದರು.