ಉಪ್ಪಿನಂಗಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಮಹಿಳೆಯೋರ್ವರು ತಾನು ಸಾಕುತ್ತಿದ್ದ ದನದ ಕರುವನ್ನು ತನ್ನ ಕೆಲಸದವನ ಜೊತೆಗೆ ಮನೆಗೆ ಕರೆದುಕೊಂಡು ಹೋಗುವಾಗ ಆಗಮಿಸಿದ ಯುವಕರ ತಂಡವೊಂದು ಮಹಿಳೆಗೆ ಹಲ್ಲೆ ನಡೆಸಿದೆ. ಏಪ್ರಿಲ್ 27 ರಂದು ಪೆರಿಯಶಾಂತಿ ಎಂಬಲ್ಲಿ ಗೂಡಂಗಡಿ ನಡೆಸುತ್ತಿರುವ ಮಹಿಳೆ ತನ್ನ ಅಂಗಡಿಯ ಕೆಲಸದಾಳು ಕುಮಾರ್ ಎಂಬವರಲ್ಲಿ ತನ್ನ ಸಾಕು ದನವನ್ನು ಮನೆಗೆ ಕೊಂಡು ಹೋಗಲು ಕೊಟ್ಟು ಕಳುಹಿಸಿದ್ದರು. ಈ ಸಮಯದಲ್ಲಿ ಬಂದ ಯುವಕರ ತಂಡ ಮಹಿಳೆ ಮತ್ತು ಕೆಲಸದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ಮಹಿಳೆಯ ಹೇಳುವ ಪ್ರಕಾರ, ಮಹೇಶ್ ಮತ್ತು ಆತನ ಸಹಚರರು ಕುಮಾರ್ ಎಂಬವರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ತಿಳಿದ ಮಹಿಳೆ ಕೂಡಲೇ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ತನ್ನ ಕೆಲಸದಾಳು ಕುಮಾರ್ ಎಂಬುವವರಿಗೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸಿದ್ದು ನನಗೂ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.