ಮಂಗಳೂರು: ತುಳುನಾಡಿನ ಕೃಷಿಕರು ಧರಿಸುವ ಮುಟ್ಟಾಲೆಯನ್ನು ಇಟ್ಟುಕೊಂಡು ಅಮೈ ಮಹಾಲಿಂಗ ನಾಯ್ಕ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಗಮನ ಸೆಳೆದರು.
ಸುರಂಗ ಕೊರೆದು ನೀರು ಹುಡುಕಾಟ ನಡೆಸಿ ಬೋಳುಗುಡ್ಡೆ ನಂದನವನ್ನಾಗಿಸಿದ 'ಆಧುನಿಕ ಭಗೀರಥ' ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ 'ಪದ್ಮಶ್ರೀ' ಪ್ರಶಸ್ತಿ ಅರಿಸಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ, ಅವರು ತುಳುನಾಡಿನ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಮುಟ್ಟಾಲೆಯನ್ನು ಧರಿಸಿಯೇ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಲು ಮಹಾಲಿಂಗ ನಾಯ್ಕ್ ಅವರು ತಮ್ಮ ಮೊಮ್ಮಗನೊಂದಿಗೆ ದಿಲ್ಲಿಗೆ ಭಾನುವಾರ ವಿಮಾನ ಏರಿದ್ದರು. ವಿಮಾನ ಪ್ರಯಾಣಕ್ಕೂ ಮುನ್ನ ದ.ಕ.ಜಿಲ್ಲಾಧಿಕಾರಿಯವರು ಅಮೈ ಮಹಾಲಿಂಗ ನಾಯ್ಕ್ ಅವರ ಯೋಗಕ್ಷೇಮ ವಿಚಾರಿಸಿದ್ದರು. ಪ್ರಯಾಣದ ಕ್ಯಾಬ್ ಹಾಗೂ ವಿಮಾನ ಯಾನ ದರವನ್ನು ಸರ್ಕಾರವೇ ಭರಿಸಿತ್ತು. ಬೆಳಗ್ಗೆ 11.15ಕ್ಕೆ ವಿಮಾನ ಏರಿದ ಮಹಾಲಿಂಗ ನಾಯ್ಕ್ ಅವರು, ಬೆಂಗಳೂರು ಮೂಲಕ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರು. ಸಂಜೆ 6ಕ್ಕೆ ದಿಲ್ಲಿ ತಲುಪಿದ ಅವರು ಅಶೋಕ ಹೊಟೇಲ್ನಲ್ಲಿ ತಂಗಿದ್ದರು.