ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಗ್ರಹದ ಮೂಲದಿಂದಲೇ ಇದನ್ನು ಬಗೆಹರಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕಾಗಿ ಮಂಗಳೂರಿನಲ್ಲಿ ಇನ್ನು ಮುಂದೆ ಕಸ ನೀಡುವಾಗಲೇ ಹಸಿ ಕಸ, ತ್ಯಾಜ್ಯ ಕಸ ವಿಂಗಡಿಸದಿದ್ದರೆ ದಂಡ ವಿಧಿಸಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಮಂಗಳೂರಿನಲ್ಲಿ ಪ್ರತಿದಿನ 270 ಟನ್ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಕಾರ್ಯವನ್ನು ಪಚ್ಚನಾಡಿ ತ್ಯಾಜ್ಯ ಡಂಪಿಂಗ್ ಯಾರ್ಡ್ನಲ್ಲಿ ಮಾಡಲಾಗುತ್ತದೆ. ಆದರೆ ಡಂಪಿಂಗ್ ಯಾರ್ಡ್ ಸಿಬ್ಬಂದಿ, ತ್ಯಾಜ್ಯ ಸಂಗ್ರಹಕ್ಕೆ ಬರುವ ಸಿಬ್ಬಂದಿ ಕೋವಿಡ್ ಸೇರಿದಂತೆ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೊರೊನಾ ಸೋಂಕಿತರು ಹೋಂ ಐಸೋಲೇಶನ್ನಲ್ಲಿ ಬಳಸಿದ ತ್ಯಾಜ್ಯವನ್ನು ಇದರೊಂದಿಗೆ ನೀಡುವ ಕಾರಣದಿಂದ ಡಂಪಿಂಗ್ ಯಾರ್ಡ್ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ.
ಡಂಪಿಂಗ್ ಯಾರ್ಡ್ನಲ್ಲಿ ಹಸಿ ಕಸ, ಒಣ ಕಸ ವಿಂಗಡನೆ ಮಾಡುವ ಬದಲಿಗೆ ಕಸ ಸಂಗ್ರಹ ಮಾಡುವಾಗಲೇ ಇದನ್ನು ವಿಂಗಡಿಸಿ ನೀಡುವುದನ್ನು ಕಡ್ಡಾಯ ಮಾಡಿದೆ. ಒಂದು ವೇಳೆ ಕಸ ವಿಂಗಡನೆ ಮಾಡಿ ನೀಡದಿದ್ದರೆ ದಂಡ ವಿಧಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ.