ಕರ್ನಾಟಕ

karnataka

ETV Bharat / city

20 ಕೇಸ್​ಗಳಲ್ಲಿ ಬೇಕಾಗಿದ್ದ ಆರೋಪಿ ಬಜ್ಪೆ ಪೊಲೀಸರ ಬಲೆಗೆ - ಮಂಗಳೂರು ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ

ಅಂದಾಜು 20 ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಕಳ್ಳನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

Mangaluru police arrest wanted thief,ಬಜ್ಪೆ ಪೊಲೀಸರಿಂದ ಕುಖ್ಯಾತ ಕಳ್ಳ ಬಂಧನ
20 ಕೇಸ್​ಗಳಲ್ಲಿ ಬೇಕಾಗಿದ್ದ ಆರೋಪಿ ಬಜ್ಪೆ ಪೊಲೀಸರ ಬಲೆಗೆ

By

Published : Dec 3, 2021, 2:57 AM IST

ಮಂಗಳೂರು: ಮನೆಗೆ ನುಗ್ಗಿ ಕಳವು, ವಾಹನ, ಗ್ಯಾಸ್ ಸಿಲಿಂಡರ್ ಕಳವು, ಮರಗಳವು ಸೇರಿದಂತೆ ಸುಮಾರು 20 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅಂತಾರಾಜ್ಯ ಕುಖ್ಯಾತ ಕಳ್ಳನನ್ನು ಬಜ್ಪೆ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ. ಅಬ್ವಾಸ್ ಅಲಿಯಾಸ್ ಮೀಯಪದವು ಅಬ್ಬಾಸ್ ಬಂಧಿತ ಆರೋಪಿ.

2020ರ ಮೇ ತಿಂಗಳಲ್ಲಿ ಅಡ್ಡೂರು ಗ್ರಾಮದ ಪಲ್ಲಂಗಡಿ ಎಂಬಲ್ಲಿನ ಅಹ್ಮದ್ ಬಾವಾ ಎಂಬುವರ ಮುಂಭಾಗದ ಕಿಟಕಿ ಮುರಿದು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಆದರೆ ಆರೋಪಿಯು ತನ್ನ ಹೆಸರು, ವಿಳಾಸಗಳನ್ನು ಬದಲಾಯಿಸಿಕೊಂಡು ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈತ ತನ್ನ ಹೆಸರನ್ನು ಅಬ್ವಾಸ್ - ಟಿ. ಅಬ್ಬಾಸ್ - ಮೀಯಪದವು ಅಬ್ಬಾಸ್ - ನಝೀರ್ - ಇಬ್ರಾಹೀಂ ಎಂದು ಬದಲಾಯಿಸಿಕೊಂಡು ಬೆಳ್ತಂಗಡಿ, ಕಡಬ, ರಾಮಕುಂಜ, ಪುತ್ತೂರು, ಉಳ್ಳಾಲ, ಕೇರಳ ರಾಜ್ಯದ ಕುಂಬಳೆ, ಮಂಜೇಶ್ವರ ಮತ್ತಿತರೆಡೆಗಳಲ್ಲಿ ತಲೆ ಮರೆಸಿಕೊಂಡು ಸುತ್ತಾಡುತ್ತಿದ್ದ.

ಗುರುವಾರ ಬೆಳಗ್ಗೆ ಪೊಲೀಸರು ಆರೋಪಿಯನ್ನು ಬಂಧಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಹಿತ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಅಬ್ವಾಸ್ ವಿರುದ್ಧ ಕೊಣಾಜೆ, ಉಳ್ಳಾಲ, ಬೆಳ್ತಂಗಡಿ ಅರಣ್ಯ ಘಟಕ, ಕೇರಳ ರಾಜ್ಯದ ಕುಂಬಳೆ, ಮಂಜೇಶ್ವರ, ಪೊಲೀಸ್ ಠಾಣೆಗಳಲ್ಲಿ ಮನೆಗೆ ನುಗ್ಗಿ ಕಳವು, ಗ್ಯಾಸ್ ಸಿಲಿಂಡರ್ ಕಳವು, ಬೈಕ್ ಕಳವು, ಅಮೂಲ್ಯ ಬೀಟಿ ಮರಗಳವು ಸೇರಿದಂತೆ ಒಟ್ಟು 20 ಪ್ರಕರಣಗಳು ದಾಖಲಾಗಿವೆ.

ಅಲ್ಲದೆ ವಿಚಾರಣೆ ವೇಳೆ ಆರೋಪಿ ಗಂಜಿಮಠದಲ್ಲಿರುವ ಕಾಂಪ್ಲೆಕ್ಸ್ ಒಂದರಲ್ಲಿ ಮೊಬೈಲ್ ಕಳವಿಗೆ ಯತ್ನಿಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details