ಮಂಗಳೂರು/ಕಡಬ:ವಿಜಯದಶಮಿ ಹಾಗೂ ಆಯುಧ ಪೂಜೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಉಪ್ಪಿನಂಗಡಿ, ನೆಲ್ಯಾಡಿ ಪೊಲೀಸ್ ಠಾಣೆಗಳ ಪೊಲೀಸರು ಭಾನುವಾರ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು.
ಆಯುಧಪೂಜೆ ವಿಶೇಷ: ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಪೊಲೀಸರು - ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ಸದಾ ಖಾಕಿ ಧರಿಸಿ ಕರ್ತವ್ಯದಿಂದ ಹಿಂದೆ ಓಡುವ ಪೊಲೀಸರು ಆಯುಧ ಪೂಜೆ ಹಾಗೂ ವಿಜಯದಶಿಯ ಅಂಗವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆಯಲ್ಲಿ ಪಾಲ್ಗೊಂಡ ದೃಶ್ಯಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಪೊಲೀಸ್ ಠಾಣೆಗಳಲ್ಲಿ ಕಂಡು ಬಂತು.
ಪ್ರತೀ ದಿನವೂ ಕೆಲಸಗಳ ಒತ್ತಡ, ಪ್ರಕರಣಗಳ ಹಿಂದೆ ಬೀಳುವ ಪೊಲೀಸರು ಭಾನುವಾರ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದು ಕಂಡುಬಂತು. ಬೆಳಗ್ಗೆಯಿಂದಲೇ ವಿವಿಧ ಠಾಣಾಧಿಕಾರಿಗಳು, ಪೊಲೀಸ್ ಸಿಬಂದಿ, ಗೃಹರಕ್ಷಕರು ಒಟ್ಟು ಸೇರಿ ತಮ್ಮ ಕರ್ತವ್ಯಗಳ ನಡುವೆಯೂ ಪೊಲೀಸ್ ಠಾಣೆಗಳನ್ನು ಸ್ವಚ್ಛ ಮಾಡಿ, ತಳಿರು ತೋರಣಗಳು, ಬಲೂನುಗಳು ಹೂವುಗಳನ್ನು ಕಟ್ಟುವ ಮೂಲಕ ಶೃಂಗಾರ ಮಾಡಿದರು.
ನಂತರ ಪೂಜೆಯ ವೇಳೆ ಆರಂಭವಾಗುತ್ತಿದ್ದಂತೆ ಎಲ್ಲಾ ಪೊಲೀಸರೂ ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆಗೆ ಆಗಮಿಸಿದರು. ಪುರುಷರು ಲುಂಗಿ, ಶರ್ಟ್, ಶಾಲು ಧರಿಸಿದರೆ ಮಹಿಳೆಯರು ಸೀರೆ ತೊಟ್ಟು, ಸಂಭ್ರಮದಿಂದ ಆಯುಧ ಪೂಜಾ ವಿಧಿ ವಿಧಾನಗಳನ್ನು ನಿರ್ವಹಿಸಿದರು. ಒಟ್ಟಿನಲ್ಲಿ ಸದಾ ಖಾಕಿ ಧರಿಸಿ ಕರ್ತವ್ಯದಿಂದ ಹಿಂದೆ ಓಡುವ ಪೊಲೀಸರು ಅಂದು ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.