ಮಂಗಳೂರು: ನಗರದ ಹೊರವಲಯದ ಅರ್ಕುಳ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಉತ್ತರಪ್ರದೇಶ ಮೂಲದ ಕಾರ್ಮಿಕ ನಾಪತ್ತೆಯಾಗಿದ್ದಾನೆ. ಮರಳುಗಾರಿಕೆಯಲ್ಲಿ ನಿರತರಾಗಿದ್ದ ಮತ್ತಿಬ್ಬರು ಕಾರ್ಮಿಕರು ಪಾರಾಗಿದ್ದಾರೆ. ಉತ್ತರ ಪ್ರದೇಶ ಮೂಲದ ರಾಜು ಸಾಹ್ ನಾಪತ್ತೆಯಾದ ಕಾರ್ಮಿಕ.
ನಿನ್ನೆ ಮಧ್ಯಾಹ್ನ ನದಿಯಲ್ಲಿ ಶಶಿರಾಜ್ ಎಂಬವರ ಧಕ್ಕೆಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾಗ ಘಟನೆ ನಡೆದಿದೆ. ವಿಪರೀತ ಮಳೆಯ ಕಾರಣ ನದಿಯಲ್ಲಿ ನೆರೆ ನೀರು ತುಂಬಿದ ಹಿನ್ನೆಲೆಯಲ್ಲಿ ರಾಜು ಸಾಹ್, ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಎಂಬವರು ಮರಳುಗಾರಿಕಾ ದೋಣಿಯನ್ನು ದಡಕ್ಕೆ ತರುತ್ತಿದ್ದರು. ಆದರೆ, ನದಿನೀರಿನ ರಭಸ ಹೆಚ್ಚಾಗಿ ದೋಣಿ ಸಹಿತ ಮೂವರೂ ಕೊಚ್ಚಿಕೊಂಡು ಹೋಗಿದ್ದಾರೆ.