ಮಂಗಳೂರು :ಬಿಜೆಪಿಯವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ತಿರುಚಿ ಅಪಪ್ರಚಾರ ಮಾಡುವುದೇ ಕೆಲಸವಾಗಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು ಟಿ ಖಾದರ್ ಹೇಳಿದರು. ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಾ ಧಾರ್ಮಿಕ ಮುಖಂಡರು, ಸ್ವಾಮೀಜಿಗಳಿಗೆ ಗೌರವ ನೀಡುತ್ತಾರೆ. ಯಾರ ಬೇಡಿಕೆಗಳಿಗೂ ಇಲ್ಲ ಎಂದಿಲ್ಲ. ಎಲ್ಲಾ ಹಿರಿಯ ಸ್ವಾಮೀಜಿಗಳೊಂದಿಗೆ ಸಿದ್ದರಾಮಯ್ಯ ಬಹಳ ಆತ್ಮೀಯತೆಯಿಂದ ಇದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುವಾಗ ಯಾವುದೇ ಒಬ್ಬ ಸ್ವಾಮೀಜಿ ಪ್ರತಿಭಟನೆ ಮಾಡಿರಲಿಲ್ಲ. ಮೂಢನಂಬಿಕೆಗಳ ವಿರುದ್ಧದ ಬಿಲ್ ತರುವ ಸಂದರ್ಭದಲ್ಲಿ ಸ್ವಾಮೀಜಿಗಳ ವಿನಂತಿ ಮಾಡಿದ್ದರೆಂದು ಅದನ್ನು ಸಿದ್ದರಾಮಯ್ಯ ಕೈಬಿಟ್ಟರು. ಆ ಬಳಿಕ ಬಂದ ಇದೇ ಬಿಜೆಪಿ ಸರ್ಕಾರ ಆ ಮೂಢನಂಬಿಕೆ ಬಿಲ್ ಅನ್ನು ಪಾಸ್ ಮಾಡಿತು. ಆಗ ಬಿಜೆಪಿಯಿಂದ ಸ್ವಾಮೀಜಿಗಳಿಗೆ ಅವಮಾನ ಆಗಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತವಿರುವ ಸರ್ಕಾರದಲ್ಲಿ ಸ್ವಾಮೀಜಿಗಳು ಧರಣಿ, ಪ್ರತಿಭಟನೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ತಿಂಗಳಿನಿಂದ ಸ್ವಾಮೀಜಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವಾರು ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ. ಜನರ ಭಾವನೆಗಳಿಗೋಸ್ಕರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೂ, ಬಿಜೆಪಿಯವರು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಸ್ವಾಮೀಜಿಗಳ ಬೇಡಿಕೆಗಳಿಗೂ ಗೌರವ ಕೊಡುವುದಿಲ್ಲ.
ಸಿದ್ದರಾಮಯ್ಯ ಸರ್ಕಾರದ ಕಾಲಘಟ್ಟದಲ್ಲಿ ಎಲ್ಲಾ ದೇವಸ್ಥಾನಗಳ ಅರ್ಚಕರಿಗೆ ಅತ್ಯಧಿಕ ವೇತನ ನಿಗದಿ ಮಾಡಲಾಯಿತು. ದೇವಸ್ಥಾನಗಳ ನಿರ್ವಹಣೆಗೆಂದು ಕೊಡುವ ತಸ್ತೀಕು ದುಡ್ಡನ್ನು 40 ಸಾವಿರ ರೂ.ವರೆಗೆ ಏರಿಕೆ ಮಾಡಿದ್ದು, ಬೇರೆ ಬೇರೆ ಧಾರ್ಮಿಕ ಕ್ಷೇತ್ರಗಳಿಗೆ ಕೋಟ್ಯಂತರ ರೂ. ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಒಂದು ನಯಾಪೈಸೆಯನ್ನೂ ಹೆಚ್ಚು ಮಾಡಿಲ್ಲ ಎಂದರು.