ಪುತ್ತೂರು (ದಕ್ಷಿಣಕನ್ನಡ):ನಿಷ್ಕಲ್ಮಷ ಮನಸ್ಸಿನ ಭಕ್ತಿಗೆ ಮಾತ್ರ ದೇವರು ಒಲಿಯುತ್ತಾನೆ. ಅಂತಃಕರಣ ಶುದ್ಧಿಯಿಂದ ಮಾಡುವ ಭಕ್ತಿ ಮತ್ತು ಉತ್ತಮ ಕೆಲಸವನ್ನು ದೇವರು ಅನುಗ್ರಹಿಸುತ್ತಾನೆ ಹಾಗೂ ಅಂತಹವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.
ಏಪ್ರಿಲ್ 24ರಿಂದ 30ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ, ಈ ಸಂದರ್ಭದಲ್ಲಿ ನಡೆದ ಭಕ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲೋ ಹುಟ್ಟಿ, ಎಲ್ಲೋ ರಾಜಕೀಯ ಜನ್ಮ ಪಡೆದು, ಇನ್ನೆಲ್ಲೋ ಬೆಳೆದು, ಮತ್ತೆಲ್ಲೋ ಸ್ಥಾನಮಾನ ಪಡೆದ ನಾನು, ಇದನ್ನೆಲ್ಲ ಆ ದೇವರ ಅನುಗ್ರಹ ಮತ್ತು ಜನರ ಬೆಂಬಲ ಎಂದು ನಂಬಿದ್ದೇನೆ. ಮಹಿಷಮರ್ದಿನಿ ದೇವಸ್ಥಾನದ ಈ ಪುಣ್ಯಕಾರ್ಯಕ್ಕೆ ನನ್ನಿಂದಾದ ಎಲ್ಲ ಸಹಕಾರ ನೀಡಲು ಬದ್ಧನಿದ್ದೇನೆ. ಕೋಡಿಂಬಾಡಿಯ ಜನ ಶುದ್ಧ ಮನಸ್ಸಿನಿಂದ ಈ ತಾಯಿಯ ಸೇವೆ ಮಾಡುತ್ತಿದ್ದಾರೆ. ನಿಮ್ಮ ಶ್ರದ್ಧಾ ಭಕ್ತಿಯ ಫಲವಾಗಿ ಈ ಊರು ರಾಷ್ಟ್ರಮಟ್ಟದಲ್ಲಿ ಬೆಳಗಲಿದೆ ಎಂದರು.