ಮಂಗಳೂರು: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಲಕನ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಉಜಿರೆ ಬಾಲಕನ ಅಪಹರಣ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು - ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಲಕನ ಅಪಹರಣ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2020ರ ಡಿಸೆಂಬರ್‌ನಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ರಥಬೀದಿಯಲ್ಲಿ ಅಭಿನವ್ ಎಂಬ ಬಾಲಕನನ್ನು ಅಪಹರಿಸಲಾಗಿತ್ತು. ಅಪಹರಣಕಾರರು ಬಿಟ್ ಕಾಯಿನ್ ಮೂಲಕ ಹಣದ ಬೇಡಿಕೆಯನ್ನಿಟ್ಟಿದ್ದರು. ಕೋಲಾರದ 4 ಮಂದಿ ಆರೋಪಿಗಳು ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್ ವ್ಯವಹಾರದಲ್ಲಿ ಉಂಟಾದ ವಿರಸದಿಂದಾಗಿ ಈ ಅಪಹರಣ ಮಾಡಿದ್ದರು ಎನ್ನಲಾಗಿತ್ತು. ಮರುದಿನವೇ ಬೆಳ್ತಂಗಡಿಯ ಪೊಲೀಸರು ಅಪಹರಣವಾಗಿದ್ದ ಬಾಲಕನನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ರಕ್ಷಣೆ ಮಾಡಿ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣದ ತನಿಖಾ ಹಂತದಲ್ಲಿ ಆರೋಪಿಗಳ ಜಾಮೀನನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿರಸ್ಕರಿಸಿದ್ದರು. ಮತ್ತು ಈ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಇದೀಗ, ಆರೋಪಿಗಳಿಬ್ಬರು ಜಾಮೀನಿಗೆ ಮರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುರಳೀಧರ ಪೈ ಅವರು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ. ಆರೋಪಿಗಳ ಪರವಾಗಿ ವಕೀಲ ಸುಕೇಶ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.