ಮಂಗಳೂರು: ನಮ್ಮ ಕಾಲದಲ್ಲಿ ವರ್ಷಕ್ಕೆ ಎರಡು ಐಎಎಸ್ ಅಧಿಕಾರಿಗಳ ವರ್ಗಾವಣೆ ಆಗಿಲ್ಲ. ನಮ್ಮ ಕಾಲದಲ್ಲಿ ಜಿಲ್ಲಾಧಿಕಾರಿ ಕೆಲಸವೇ ಬಿಟ್ಟು ರಾಜಿನಾಮೆ ನೀಡಿ ಯಾರೂ ಹೋಗಿಲ್ಲ. ನಮ್ಮ ಕಾಲ ಘಟ್ಟದಲ್ಲಿ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ, ದೇಶದ್ರೋಹಿಗಳೆಂಬ ಆರೋಪ ಹೊರಿಸಿಲ್ಲ ಎಂದು ಖಾದರ್ಗಿದು ಕಾಲವಲ್ಲ ಎಂಬ ಸಚಿವ ಕೋಟ ಹೇಳಿಕೆಗೆ ಶಾಸಕ ಯು.ಟಿ.ಖಾದರ್ ಮರು ಟಾಂಗ್ ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲಘಟ್ಟದಲ್ಲಿ ವೆಂಟಿಲೇಟರ್ ಇಲ್ಲದೆ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳು ಪರದಾಡುವ ಸನ್ನಿವೇಶ ಬಂದಿಲ್ಲ. ಮರಳಿಗೆ 18-20 ಸಾವಿರ ರೂ. ಆಗಿರಲಿಲ್ಲ. ನಾವು ಉಸ್ತುವಾರಿ ಸಚಿವರಾಗಿದ್ದಾಗ ನಾವೇ ಅಧಿಕಾರ ಚಲಾಯಿಸುತ್ತಿದ್ದೆವು. ಈಗ ಉಸ್ತುವಾರಿ ಸಚಿವರು ಇವರು, ಅಧಿಕಾರ ಚಲಾಯಿಸುವವರು ಬೇರೆಯವರು ಎಂದು ವ್ಯಂಗ್ಯವಾಡಿದರು.
ಜಿಲ್ಲಾಧಿಕಾರಿಯವರಿಗೆ ಜೀವ ಬೆದರಿಕೆ ಬಂದಿದ್ದು, ಕನಿಷ್ಠ ಖಂಡನೆ ಮಾಡುವಂತಹ ಹೇಳಿಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಕೊಟ್ಟಿಲ್ಲ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಅದನ್ನು ಇವರು ಯಾಕೆ ತಮ್ಮದೆಂದು ಹೇಳಿ ತಿರುಗುತ್ತಿದ್ದಾರೆ. ಇವರೇನು ಮಾಡಿದ್ದಾರೆಂದು ಹೇಳಲಿ? ಅಧಿಕಾರಿಗಳಿಗೆ ಧೈರ್ಯ ಹೇಳುವಂತಹ ಒಂದು ಹೇಳಿಕೆ ಕೊಟ್ಟಿದ್ದಾರಾ? ಅದಲ್ಲದೆ ಬೆಳಗ್ಗೆ ಆರೋಪಿಯನ್ನು ಬಂಧಿಸಿ ಸಂಜೆ ಜಾಮೀನು ಮೇಲೆ ಬಿಡಲಾಗಿದೆ ಎಂದು ವ್ಯಂಗ್ಯವಾಡಿದರು.
ದ.ಕ ಜಿಲ್ಲೆಯಲ್ಲಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದ್ದು, ಜನ ಸಾಮಾನ್ಯರಿಗೆ ಕೇಳಿದ್ದಲ್ಲಿ ಮರುಳು ಸಿಗುತ್ತಿಲ್ಲ. 18-20 ಸಾವಿರ ರೂ. ನೀಡಿದರೆ ರಾತ್ರಿಯಿಂದ ಬೆಳಗ್ಗಿನ ಹೊತ್ತಲ್ಲಿ ಮರಳು ಬಂದು ಬೀಳುತ್ತದೆ. ಕಟ್ಟಡ ಕಾಮಗಾರಿ ಕೆಲಸ ಮಾಡುವವರು ಹೊಳೆ ಬದಿಯ ಮರಳು ಬಳಸಿ ಕಳಪೆ ಕಾಮಗಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಯಾಂಡ್ ಬಜಾರ್ ಆ್ಯಪ್ ಅನ್ನು ಯಾಕೆ ಬಂದ್ ಮಾಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಲಿ ಎಂದು ಹೇಳಿದರು.
ಅದರ ಜೊತೆಗೆ ಭೂವಿಜ್ಞಾನ ಇಲಾಖೆಯ ಎಲ್ಲಾ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಅಕ್ರಮ ಮಾಡಲು ಬೆಂಬಲ ಮಾಡದಿದ್ದರೆ ವರ್ಗಾವಣೆ ಮಾಡಲಾಗುತ್ತದೆ. ಹೇಳಿದ ಮಾತು ಕೇಳದಿದ್ದಲ್ಲಿ ವೈದ್ಯರು ವರ್ಗಾವಣೆ. ಮಾತಿಗೆ ಒಪ್ಪದಿದ್ದರೆ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಲಾಗುತ್ತದೆ. ವರ್ಷದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಬಂದಲ್ಲಿ ಮಂಗಳೂರು ನಗರ ಯಾವ ರೀತಿ ಅಭಿವೃದ್ಧಿಯಾಗಲು ಸಾಧ್ಯ. ಆರು ತಿಂಗಳಿಗೊಮ್ಮೆ ವರ್ಗಾವಣೆ ಮಾಡುವುದಕ್ಕೆ ಆಡಳಿತಾತ್ಮಕ ವರ್ಗಾವಣೆ ಎಂದು ಹೇಳಲಾಗುತ್ತದೆಯೇ ಎಂದು ಖಾದರ್ ಜಿಲ್ಲಾಡಳಿತಕ್ಕೆ ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳನ್ನು ಕನಿಷ್ಠ ಒಂದೂವರೆ ವರ್ಷದಿಂದ ಎರಡು ವರ್ಷಗಳ ಕಾಲ ಇಡಬೇಕೆಂದು ನಿಯಮ ಇದೆ. ಸುಮ್ಮನೆ ಆಡಳಿತಾತ್ಮಕ ಕಾರಣ ನೀಡುವುದು ಬೇಡ. ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಒಂದೂವರೆ ವರ್ಷಗಳ ಕಾಲ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಜನರು ಬೆಡ್ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆ ಬಂದ್ ಮಾಡಿರುವ ಪರಿಣಾಮ ಬಡವರು ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಇದನ್ನು ಸರಿಪಡಿಸುವ ಬದಲು ಜಿಲ್ಲಾಡಳಿತ ಆರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಯವರ ಬದಲಾವಣೆ ಮಾಡಲು ತೊಡಗಿದೆ. ಜಿಲ್ಲಾಡಳಿತ ಯಾಕೆ ವರ್ಗಾವಣೆ ಮಾಡಿದೆ. ಇದಕ್ಕೆ ಕಾರಣ ನೀಡಲಿ. ಸರಿ ಇಲ್ಲದಿದ್ದರೆ ಯಾಕೆ ನೀವು ಅಷ್ಟು ತುರ್ತಾಗಿ ಅಂದು ಇಲ್ಲಿಗೆ ಕರೆ ತಂದಿದ್ದೀರಿ. ಹಿಂದೆ ನಮ್ಮ ಸರ್ಕಾರ ಇದ್ದಾಗ ದ.ಕ. ಜಿಲ್ಲೆಗೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಎಸ್ಪಿಗಳನ್ನು ಕರೆ ತರುವಾಗ ತಿಂಗಳುಗಟ್ಟಲೆ ಅವರ ಹಿನ್ನೆಲೆಗಳ ಚರ್ಚಿಸಿ, ಕರೆತರಲಾಗುತ್ತಿತ್ತು. ಇಂತಹ ದೂರದೃಷ್ಟಿತ್ವ ಬಿಜೆಪಿ ಸರ್ಕಾರದಲ್ಲಿ ಇಲ್ಲ ಎಂದು ಯು.ಟಿ.ಖಾದರ್ ಹೇಳಿದರು.