ಮಂಗಳೂರು: ಮೀನು ಹಿಡಿಯುತ್ತಿದ್ದ ವ್ಯಕ್ತಿಯೋರ್ವ ಜಾರಿ ನೀರಿಗೆ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಲು ಧಾವಿಸಿದ ವ್ಯಕ್ತಿಗೂ ಸಹ ಹೃದಯಾಘಾತವಾಗಿದ್ದು, ಇಬ್ಬರೂ ದುರ್ಮರಣಕ್ಕೀಡಾದ ವಿಚಿತ್ರ ಘಟನೆ ನಿನ್ನೆ ಸಂಜೆ ನಗರದ ಪಂಜಿಮೊಗರಿನ ಮಾಯಿಲಾದಲ್ಲಿ ನಡೆದಿದೆ.
ನೀರಿನಲ್ಲಿ ಮುಳುಗುತ್ತಿದ್ದವನ ರಕ್ಷಣೆಗೆ ಧಾವಿಸಿದ ವ್ಯಕ್ತಿಗೆ ಹೃದಯಾಘಾತ: ಇಬ್ಬರು ದುರ್ಮರಣ - fishermen died
ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಧಾವಿಸಿದ ವ್ಯಕ್ತಿಗೆ ಹೃದಯಾಘಾತವಾಗಿ ಇಬ್ಬರೂ ಮೃತಪಟ್ಟಿರುವ ಘಟನೆ ಪಂಜಿಮೊಗರಿನ ಮಾಯಿಲಾದಲ್ಲಿ ನಡೆದಿದೆ.
ಅಂಬಿಕಾನಗರ ಜಾಕಿಂ ಮಸ್ಕರನೇಸ್ (53) ಮತ್ತು ವಿದ್ಯಾನಗರ ವಾಸಿ ಶೇಷಪ್ಪ (50) ಮೃತ ದುರ್ದೈವಿಗಳು. ನಿನ್ನೆ ಸಂಜೆ ಮೃತ ಜಾಕಿಂ ಮಸ್ಕರನೇಸ್ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಪಂಜಿಮೊಗರಿನ ಮಾಯಿಲಾದಲ್ಲಿನ ಆವೆ ಮಣ್ಣಿನ ಪಾಯದಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ಪಾಯದ ನೀರಿನಲ್ಲಿ ಮುಳುಗುತ್ತಿದ್ದರು. ಅಲ್ಲಿಯೇ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಶೇಷಪ್ಪ ಎಂಬವರು ಇದನ್ನು ಗಮನಿಸಿ, ತಕ್ಷಣ ಮಸ್ಕರನೇಸ್ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಅವರಿಗೂ ಸಹ ಏಕಾಏಕಿ ಹೃದಯಘಾತವಾಗಿದೆ.
ಇನ್ನು ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಮಾರ್ಗಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.