ಮಂಗಳೂರು : ಉಗ್ರರ ಪರ ಗೋಡೆ ಬರಹ ಬರೆದು ಬಂಧನಕ್ಕೀಡಾಗಿರುವ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.
ತೀರ್ಥಹಳ್ಳಿ ಮೂಲದ ಮುಹಮ್ಮದ್ ಶಾರೀಕ್ (22), ಮಾಝ್ ಮುನೀರ್ ಅಹ್ಮದ್ (21) ಎಂಬುವರು ಮಂಗಳೂರಿನ ಕದ್ರಿಯ ಅಪಾರ್ಟ್ಮೆಂಟ್ ಗೋಡೆ ಮತ್ತು ನ್ಯಾಯಾಲಯದ ಆವರಣದ ಹಳೆಯ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಬರೆದಿದ್ದರು.
ಇದನ್ನೂ ಓದಿ...ಮಂಗಳೂರಿನಲ್ಲಿ ವಿವಾದಿತ ಗೋಡೆ ಬರಹ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಶನಿವಾರದಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸ್ ಕಸ್ಟಡಿಗೆ ನೀಡಿದ ನ್ಯಾಯಾಲಯ ಕೋವಿಡ್ ಪರೀಕ್ಷೆಗೆ ಸೂಚಿಸಿತ್ತು. ವರದಿ ನೆಗೆಟಿವ್ ಬಂದ ಕಾರಣ ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರಿದ್ದು, ಅದರಂತೆ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ವಿದೇಶದಿಂದ ಕುಮ್ಮಕ್ಕು, ಮತ್ತೋರ್ವ ವಶಕ್ಕೆ: ಉಗ್ರ ಗೋಡೆ ಬರಹ ಪ್ರಕರಣದಲ್ಲಿ ಪ್ರಮುಖ ಆರೋಪಿ ಮುಹಮ್ಮದ್ ಶಾರೀಕ್ಗೆ ಪ್ರಚೋದನೆ ನೀಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗೆ ವಿದೇಶದಿಂದಲೇ ವ್ಯಕ್ತಿಯೊಬ್ಬ ಕುಮ್ಮಕ್ಕು ನೀಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.