ಕರ್ನಾಟಕ

karnataka

ETV Bharat / city

ಕರಾವಳಿಯಲ್ಲಿ ತುಳು ಲಿಪಿ ಟ್ರೆಂಡ್: ಎಲ್ಲೆಲ್ಲೂ ತುಳು ನಾಮಫಲಕಗಳದ್ದೇ ಹವಾ..! - Tulu script nameplate trend

ಇದೀಗ ಕರಾವಳಿಯ ಅಂಗಡಿಗಳು, ಹೋಟೆಲ್​, ಬೇಕರಿ, ಬರ್ತ್ ಡೇ ಕೇಕ್​, ಮದುವೆ ಸಮಾರಂಭದಲ್ಲಿ ವಧೂ - ವರರ ಹೆಸರುಗಳಲ್ಲಿ, ಮನೆಯ ಹೆಸರುಗಳಲ್ಲಿ ತುಳು ಲಿಪಿಯನ್ನು ಬಳಸುವ ಟ್ರೆಂಡ್ ಆರಂಭವಾಗಿದೆ.

tulu-script-nameplate-trend-in-dakshinakannada-district
ಕರಾವಳಿಯಲ್ಲಿ ತುಳು ಲಿಪಿ ಟ್ರೆಂಡ್

By

Published : Jan 30, 2021, 1:53 PM IST

Updated : Jan 30, 2021, 2:25 PM IST

ಮಂಗಳೂರು:ಕರಾವಳಿಯಲ್ಲಿ ಇದೀಗ ಎಲ್ಲೆಲ್ಲೂ ತುಳು ಲಿಪಿಯ ಟ್ರೆಂಡ್ ಶುರುವಾಗಿದೆ. ಜನರು ಸ್ವಯಂ ಜಾಗೃತರಾಗಿ ತುಳು ಲಿಪಿಯತ್ತ ಒಲವು ಮೂಡಿಸುತ್ತಿದ್ದಾರೆ.

ಕರಾವಳಿಯಲ್ಲಿ ತುಳು ಲಿಪಿ ಟ್ರೆಂಡ್

ಸಾವಿರ ಸಾವಿರ ವರ್ಷಗಳ ಇತಿಹಾಸವಿರುವ ತಾಳೆಯೋಲೆ, ಶಿಲಾಶಾಸನಗಳಲ್ಲಿ ಬರೆಯಲಾಗುತ್ತಿದ್ದ ತುಳುಲಿಪಿಯು ಒಂದಷ್ಟು ಸಮಸ್ಯೆಗಳಿಂದ ನನೆಗುದಿಗೆ ಬಿದ್ದಿತ್ತು.‌ ಖ್ಯಾತ ವಿದ್ವಾಂಸ ವೆಂಕಟರಾಜ ಪುಣಿಂಚಿತ್ತಾಯರ ಶೋಧನೆಯ ಫಲವಾಗಿ ಮತ್ತೆ ಬೆಳಕಿಗೆ ಬಂದ ತುಳು ಲಿಪಿಯು ಈಗ, ಮತ್ತೆ ಮೇಲ್ಪಂಕ್ತಿ ಪಡೆಯುವ ಲಕ್ಷಣಗಳು ಗೋಚರಿಸುತ್ತಿದೆ.

ಯುವ ಸಮೂಹ ತುಳುಲಿಪಿಯನ್ನು ಎಲ್ಲ ಕಡೆಗಳಲ್ಲಿ ಬಳಸಲು‌ ಆರಂಭಿಸಿದ್ದಾರೆ.‌ ಇದೀಗ ಕರಾವಳಿಯ ಅಂಗಡಿಗಳು, ಹೋಟೆಲ್​, ಬೇಕರಿ, ಬರ್ತ್ ಡೇ ಕೇಕ್​, ಮದುವೆ ಸಮಾರಂಭದಲ್ಲಿ ವಧೂ - ವರರ ಹೆಸರುಗಳಲ್ಲಿ, ಮನೆಯ ಹೆಸರುಗಳಲ್ಲಿ ತುಳು ಲಿಪಿಯನ್ನು ಬಳಸುವ ಟ್ರೆಂಡ್ ಆರಂಭವಾಗಿದೆ. ಅಲ್ಲದೇ, ಉಡುಪಿ ಕೃಷ್ಣ ಮಠ ಸೇರಿದಂತೆ ಕೆಲವೊಂದು ದೇಗುಲಗಳಲ್ಲಿ ತುಳು ನಾಮಫಲಕಗಳನ್ನು ಅಳವಡಿಸಿರುವುದನ್ನು ಕಾಣಬಹುದು.

ಸಸಿಹಿತ್ಲು ಶ್ರೀ ಭಗವತಿ ಯಕ್ಷಗಾನ ಮೇಳದ ಪರದೆಯಲ್ಲಿಯೂ ತುಳುಲಿಪಿಯನ್ನು ಬಳಸಲಾಗಿದೆ. ಕೆಲವೊಂದು ಸಂಘಟನೆಗಳು ತಮ್ಮ ಟೀ ಶರ್ಟ್​ಗಳಲ್ಲಿಯೂ ತುಳುಲಿಪಿ‌ ಅಳವಡಿಸಿಕೊಂಡಿವೆ. ದ.ಕ.ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಅವರು, ತಮ್ಮ ಒಂದು ಬಸ್​​​​​ನಲ್ಲಿ ತುಳುಲಿಪಿ ಬರೆಯಿಸಿರುವ ಮೂಲಕ‌ ತುಳುಲಿಪಿಯ ಬಗೆಗಿನ ತಮ್ಮ ಒಲವನ್ನು ತೋರಿಸಿದ್ದಾರೆ‌.

ಈ ನಡುವೆ 'ಜೈ ತುಳುನಾಡು ಸಂಘಟನೆ', 'ಯುವ ತುಳುನಾಡು ® ಕುಡ್ಲ' ಮುಂತಾದ ಉತ್ಸಾಹಿ ಯುವಕರ ತಂಡಗಳು ತುಳುಲಿಪಿಯ, ತುಳುಭಾಷೆಯ ಉತ್ಥಾನಕ್ಕಾಗಿ ಸದ್ದಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ‌ದುಡಿಯುತ್ತಿವೆ. ಜೈ ತುಳುನಾಡು ಸಂಘಟನೆಯು ಆನ್ಲೈನ್ ಮುಖಾಂತರ ಆಸಕ್ತರಿಗೆ ಉಚಿತವಾಗಿ ತುಳುಲಿಪಿ ಕಲಿಸುತ್ತಿದ್ದು, ಲಾಕ್​ಡೌನ್‌ ಸಂದರ್ಭದಲ್ಲಿ ಇದಕ್ಕೆ ವೇಗ ದೊರಕಿ ಸಾವಿರಾರು ಮಂದಿ ತುಳುಲಿಪಿಯಲ್ಲಿ ಬರೆಯಲು, ಓದಲು ಕಲಿತಿದ್ದಾರೆ‌. ಅದೇ ರೀತಿ ಸಾಕಷ್ಟು ದೇಗುಲಗಳಿಗೆ, ಊರುಗಳಿಗೆ, ಬಸ್ ತಂಗುದಾಣಗಳಿಗೆ ತುಳು ನಾಮಫಲಕಗಳ ಅಳವಡಿಕೆಯ ಹಿಂದೆ ಜೈ ತುಳುನಾಡು ಸಂಘಟನೆಯ ಶ್ರಮ ಬಹಳಷ್ಟಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೂ ಇದೇ ಜೈ ತುಳುನಾಡು ಸಂಘಟನೆ ತುಳುನಾಮಫಲಕ ನೀಡಿದ್ದು, ಇದೀಗ ಅವರು ತಮ್ಮ ಕಚೇರಿಯಲ್ಲಿ ತುಳುಲಿಪಿಯ ನಾಮಫಲಕವನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಮಂಗಳೂರು ಮನಪಾದಲ್ಲಿಯೂ ತುಳುನಾಮಫಲಕ ಅಳವಡಿಸಬೇಕೆಂದು ಈ ಸಂಘಟನೆ ಮನವಿ ನೀಡಿದೆ.

ಓದಿ:ಅರ್ಕುಳದಲ್ಲಿ ವೃದ್ಧ ದಂಪತಿ ಕೋಳಿ ಕದ್ದ ಪ್ರಕರಣ: ಸಿಕ್ಕಿಬಿದ್ದ ಆರೋಪಿಗಳಿಗೆ ಸಾರ್ವಜನಿಕರು ಮಾಡಿದ್ದೇನು?

ಇದೇ ರೀತಿ 'ಯುವ ತುಳುನಾಡು ® ಕುಡ್ಲ' ಸಂಘಟನೆಯೂ ತುಳುಲಿಪಿಯ ಔನ್ನತ್ಯಕ್ಕೆ ಬಗ್ಗೆ ಒಲವು ತೋರುತ್ತಿದ್ದು, ಇತ್ತೀಚಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಉಪ ಪೊಲೀಸ್ ಆಯುಕ್ತರಿಗೆ ತುಳು ನಾಮಫಲಕವನ್ನು ನೀಡಿದ್ದಾರೆ. ತುಳುವರಲ್ಲದಿದ್ದರೂ ಈ ಇಬ್ಬರೂ ತಮ್ಮ ಕಚೇರಿಯಲ್ಲಿ ಇದೇ ನಾಮಫಲಕವನ್ನು ಅಳವಡಿಸಿ, ತುಳುಭಾಷಾ ಪ್ರೇಮ ಮೆರೆದಿದ್ದಾರೆ.

ತುಳುಭಾಷೆಯು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕೆಂಬ ಕೂಗು ಕೇಳಿ ಬರುತ್ತಿದ್ದರೂ, ಕಾನೂನಿನ ತೊಡಕು ಈ ಕಾರ್ಯಕ್ಕೆ ಅಡ್ಡ ಬರುತ್ತಿದೆ. ಈ ನಡುವೆ ತುಳು ಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಬೇಕೆಂದು ಇತ್ತೀಚೆಗೆ ದ.ಕ.ಜಿಲ್ಲೆಯ ಸಂಸದರು, ಶಾಸಕರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿದ್ದಾರೆ.

ಈ‌ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪನವರು ತುಳುಭಾಷೆಯನ್ನು ರಾಜ್ಯಭಾಷೆಯಾಗಿ ಅಂಗೀಕರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಕ್ರೋಢೀಕರಿಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ತುಳು ಲಿಪಿಯಲ್ಲಿ‌ ಆದ ಸಂಚಲನ ತುಳುಭಾಷೆಯನ್ನು ಅಧಿಕೃತ ರಾಜ್ಯಭಾಷೆಯಾಗಲು ಪೂರಕವಾಗಿ ಸಹಕರಿಸುವುದೇ ಎಂದು ಕಾದು ನೋಡಬೇಕಿದೆ.

Last Updated : Jan 30, 2021, 2:25 PM IST

ABOUT THE AUTHOR

...view details