ಮಂಗಳೂರು: ತುಳು ಭಾಷೆಯ ಹಿರಿಯ ಸಾಹಿತಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್ ಇಂದು ನಿಧನರಾಗಿದ್ದಾರೆ.
ಸೀತಾರಾಮ್ ಕುಲಾಲ್ ಅವರು ನೆಲೆಯೂರಿದ್ದು ಮಂಗಳೂರಿನ ಬಿಜೈಯಲ್ಲಿ. 'ದಾಸಿ ಪುತ್ರ' ಎಂಬ ಕನ್ನಡ ನಾಟಕದ ಮೂಲಕ ಅವರು ರಂಗಭೂಮಿ ಪ್ರವೇಶಿಸಿದ್ದರು. ಅಲ್ಲದೇ, ತುಳುಚಿತ್ರ ರಸಿಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಚಲನಚಿತ್ರ ಗೀತೆಗಳನ್ನು ಅವರು ರಚಿಸಿದ್ದಾರೆ.
'ಮೋಕೆದ ಸಿಂಗಾರಿ', 'ಪಕ್ಕಿಲು ಮೂಜಿ ಒಂಜೇ ಗೂಡು', 'ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್', 'ಬ್ರಹ್ಮನ ಬರವು ಮಾಜಂದೆ ಪೊಂಡಾ', 'ಅಪ್ಪೆ ಮನಸ್ ಬಂಗಾರ ಅಮ್ಮ ತೆನಸ್ ಸಿಂಗಾರ', 'ಡಿಂಗಿರಿ ಮಾಮ ಪೊಡಿದ್ ಪಾರಡಾ'....ಹೀಗೆ ಹಲವಾರು ಸೂಪರ್ ಹಿಟ್ ತುಳು ಹಾಡುಗಳನ್ನು ಅವರು ಬರೆದಿದ್ದಾರೆ. ಈ ಹಾಡುಗಳು ಇಂದು ಕೂಡಾ ತುಳುನಾಡಿನ ಜನರ ನೆನಪಲ್ಲಿ ಅಚ್ಚಳಿಯದೆ ಉಳಿದಿವೆ.
ಕಳೆದ 45 ವರ್ಷಗಳಿಂದ ತಾವು ರಚಿಸಿರುವ ಯಾವುದೇ ಕೃತಿಗಾಗಲಿ, ನಾಟಕ ಹಾಗೂ ಹಾಡುಗಳಿಗಾಗಲಿ ಸಂಭಾವನೆಯನ್ನು ಪಡೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಅವರ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ. ಅವರಿಗೆ ‘ರಂಗಕಲಾಭೂಷಣ’ ‘ತುಳು ರತ್ನ’, ‘ಪೆರ್ಮೆದ ತುಳುವೆ’, ‘ತುಳುಸಿರಿ’, ‘ತುಳು ಸಾಹಿತ್ಯ ರತ್ನಾಕರ’, ‘ತೌಳವ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ ಸಂದಿವೆ. ಇದರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2014ರ ಸಾಲಿನ ಗೌರವ ಪ್ರಶಸ್ತಿ ನೀಡಿದೆ.