ಮಂಗಳೂರು: 'ತುಳುಲಿಪಿ ಬ್ರಹ್ಮ' ಎಂದು ಪ್ರಖ್ಯಾತರಾದ ಡಾ.ವೆಂಕಟರಾಜ ಪುಣಚಿತ್ತಾಯ ಇವರ ಜನ್ಮದಿನ ಅಕ್ಟೋಬರ್ 10ನ್ನು 'ತುಳುಲಿಪಿ ದಿನ'ವನ್ನಾಗಿ ಇಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಅಧಿಕೃತ ಘೋಷಣೆ ಮಾಡಲಾಯಿತು.
ದಿ.ಡಾ.ವೆಂಕಟರಾಜ ಪುಣಿಂಚಿತ್ತಾಯ ಇವರ 84ನೇ ಹುಟ್ಟುಹಬ್ಬದ ನಿಮಿತ್ತ ನಗರದ ಉರ್ವಸ್ಟೋರ್ ನಲ್ಲಿರುವ ತುಳು ಭವನದ ಸಿರಿ ಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಅಕ್ಟೋಬರ್ 10ನ್ನು 'ತುಳುಲಿಪಿ ದಿನ' ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಸಂದರ್ಭ ಖ್ಯಾತ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಅವರು ಮಾತನಾಡಿ, ಯಾರು ನಮಗೆ ಜೀವನದಲ್ಲಿ ಉತ್ತಮ ದಾರಿಯನ್ನು ತೋರಿಸಿ ಕೊಟ್ಟಿದ್ದಾರೋ ಅವರೆಲ್ಲರೂ ಪ್ರಾತಃಸ್ಮರಣೀಯರು. ಅಂತವರಲ್ಲಿ 'ತುಳುಲಿಪಿ ಬ್ರಹ್ಮ' ಎಂದು ಪ್ರಖ್ಯಾತರಾದ ಪುಂಡೂರು ಡಾ.ವೆಂಕಟರಾಜ ಪುಣಚಿತ್ತಾಯರೂ ಓರ್ವರು. ಇವರಲ್ಲದೇ ತುಳುನಾಡಿನ ಭಾಷೆಯ ಬೆಳವಣಿಗೆಗೆ ಕಾರಣರಾದ ಡಾ.ಯು.ಪಿಉಪಾಧ್ಯಾಯ, ಯು.ಎಸ್.ಪಣಿಯಾಡಿ ಇವರುಗಳೂ ಪ್ರಾತಃಸ್ಮರಣೀಯರು ಎಂದರೂ ತಪ್ಪಿಲ್ಲ ಎಂದು ಹೇಳಿದರು.
ಡಾ.ವೆಂಕಟರಾಜ ಪುಣಿಂಚಿತ್ತಾಯರು ತುಳು ಭಾಷೆ, ತುಳು ಕಾವ್ಯ, ತುಳು ಸಂಸ್ಕೃತಿ-ಸಾಹಿತ್ಯಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿದ್ದರೂ, ಅವರಲ್ಲಿ ತಾನೊಬ್ಬ ಸಾಧಕ ಎಂಬ ಭಾವನೆ ಅವರ ಮನಸ್ಸಲ್ಲಿಲ್ಲ. ಅಂತಹ ವಿನೀತ ಸ್ವಭಾವದ ವ್ಯಕ್ತಿತ್ವದ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪು ನಮ್ಮ ಮನಸ್ಸಲ್ಲಿದೆ. ಅದು ಇಂದಿಗೆ ಮಾತ್ರ ಸೀಮಿತವಾಗಬಾರದು, ಯಾವಾಗಲೂ ಇರಬೇಕು ಎಂಬ ಉದ್ದೇಶದಿಂದ ಅವರು ಕೆಲಸ ಮಾಡಿರುವ ಕ್ಷೇತ್ರದ ಎಲ್ಲರೂ ಒಂದಾಗಿ ಅವರ ಜನ್ಮದಿನ ಅಕ್ಟೋಬರ್ 10ನ್ನು 'ತುಳುಲಿಪಿ ದಿನ' ಆಚರಣೆ ಮಾಡುವುದಾಗಿ ನಿರ್ಣಯ ಮಾಡಲಾಗಿದೆ. ಇದನ್ನು ಕರ್ನಾಟಕ ಸರಕಾರದ ಅಡಿ ಬರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಇದೊಂದು ಬಹಳ ಸಂತೋಷದ ಕ್ಷಣ ಎಂದು ಡಾ.ಪಾದೆಕಲ್ಲು ವಿಷ್ಣು ಭಟ್ ಹೇಳಿದರು.
ಈ ಸಂದರ್ಭ ಸಾಧಕರಿಗೆ ಸನ್ಮಾನ ಹಾಗೂ ಪು.ವೆಂ.ಪು ನೂತ್ತೊಂಜಿ ನೆಂಪು ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ, ನಿಟ್ಟೆ ವಿವಿ ತುಳು ಅಧ್ಯಯನ ಕೇಂದ್ರ ಡಾ.ಸಾಯಿಗೀತ, ಸಾಹಿತಿ ವಿಜಯರಾಜ ಪುಣಿಂಚಿತ್ತಾಯ, ಮಾಜಿ ಕಸಪಾ ಅಧ್ಯಕ್ಷ ಹರಿಕೃಷ್ಣ ಪುನರೂರು ಮತ್ತಿತರರು ಉಪಸ್ಥಿತರಿದ್ದರು.