ಮಂಗಳೂರು :ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ನ್ಯೂಪಡ್ಪು ಮನೆಗೆ ಭೇಟಿದ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಳಸೀ ಗೌಡ ಉಪಾಹಾರ ಸೇವನೆ ಮಾಡಿದರು.
ಹರೇಕಳದಲ್ಲಿ ಪದ್ಮಶ್ರೀ ಪುರಸ್ಕೃತರ ಸಮಾಗಮ ಈ ಸಂದರ್ಭದಲ್ಲಿ ಮಾತನಾಡಿದ ಹಾಜಬ್ಬ ಅವರು, ತುಳಸೀ ಗೌಡ ಅಮ್ಮನವರು ನನ್ನ ಮನೆಗೆ ಭೇಟಿ ನೀಡಿರುವುದು ನನ್ನ ಪುಣ್ಯ. ಮೊನ್ನೆ ದೆಹಲಿಯ ಏರ್ಪೋರ್ಟ್ನಲ್ಲಿ ಸಿಕ್ಕಾಗ ಸರಿಯಾಗಿ ಮಾತನಾಡಲು ಆಗಿರಲಿಲ್ಲ. ಈಗ ಅವರೇ ನಮ್ಮ ಮನೆಗೆ ಬಂದಿದ್ದಾರೆ. ಇದು ತುಂಬಾ ಸಂತೋಷದ ವಿಷಯ ಎಂದರು.
ತುಳಸೀಗೌಡರು ಮಾತನಾಡಿ, ಹಾಜಬ್ಬನವರು ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು. ನಿಮ್ಮೆಲ್ಲರ ಸಹಕಾರ ಅವರಿಗೆ ಇರಲಿ. ಹಾಜಬ್ಬರ ಶಾಲೆಯ ಅಭಿವೃದ್ಧಿಗೆ ನನ್ನಿಂದಾಗುವ ಸಹಕಾರವನ್ನು ನೀಡುತ್ತೇನೆ. ನೀವೆಲ್ಲರೂ ಅವರ ಕನಸಿಗೆ ನೀರೆರೆಯಿರಿ ಎಂದು ಹೇಳಿದರು.
ಬಳಿಕ ಹಾಜಬ್ಬರೊಂದಿಗೆ ಶಾಲೆಗೆ ಭೇಟಿ ನೀಡಿದ ತುಳಸೀ ಗೌಡ ಅವರನ್ನು ಶಾಲೆಯ ವಿದ್ಯಾರ್ಥಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಶಾಲೆಯ ವಿದ್ಯಾರ್ಥಿಗಳನ್ನು ತುಳಸೀಗೌಡರು ಮಾತನಾಡಿಸಿದರು. ಈ ಸಂದರ್ಭ ಹರೇಕಳ ಗ್ರಾಮಸ್ಥರಿಂದ ತುಳಸೀ ಗೌಡರನ್ನು ಅಭಿನಂದಿಸಲಾಯಿತು.