ಕರ್ನಾಟಕ

karnataka

ETV Bharat / city

ಮಕ್ಕಳನ್ನು ಕೋವಿಡ್​ ಸೋಂಕಿನಿಂದ ತಪ್ಪಿಸಲು ಪ್ರತಿ ಗ್ರಾಮದಲ್ಲಿ ತಪಾಸಣೆ: ಸಿಎಂ ಬೊಮ್ಮಾಯಿ - ಕೋವಿಡ್ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿಕೆ

ರಾಜ್ಯಾದ್ಯಂತ ಕೋವಿಡ್​ ಮೂರನೇ ಅಲೆ ಭೀತಿ ಕಾಡುತ್ತಿದೆ. ಈ ಹಿನ್ನೆಲೆ ಮಕ್ಕಳ ಆಸ್ಪತ್ರೆಯ ಐಸಿಯು ಸಂಖ್ಯೆ ಹೆಚ್ಚಿಸಲಾಗುವುದು‌. ಈಗಿರುವ ಐಸಿಯುವಿನಲ್ಲಿ ಶೇಕಡ 50 ರಷ್ಟು ಮಕ್ಕಳಿಗೆ ಮೀಸಲಿಡಲು ನಿರ್ಧರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

cm
cm

By

Published : Aug 12, 2021, 1:45 PM IST

Updated : Aug 12, 2021, 2:05 PM IST

ಮಂಗಳೂರು: ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಗ್ರಾಮದಲ್ಲಿ ಮಕ್ಕಳ ತಪಾಸಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಪ್ರಕರಣಗಳು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತವೆಯೋ ಅಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಯಾವುದೇ ಸಂದರ್ಭದಲ್ಲೂ ಮಕ್ಕಳಿಗೆ ತೊಂದರೆಯಾಗಬಾರದು. ಅವರ ಇಮ್ಯುನಿಟಿ ಸದೃಢವಾಗಿರಬೇಕು. ದೊಡ್ಡ ಪ್ರಮಾಣದಲ್ಲಿ ಮಕ್ಕಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಆಸ್ಪತ್ರೆಯ ಐಸಿಯು ಸಂಖ್ಯೆ ಹೆಚ್ಚಿಸಲಾಗುವುದು‌. ಈಗಿರುವ ಐಸಿಯುವಿನಲ್ಲಿ ಶೇಕಡ 50 ರಷ್ಟು ಮಕ್ಕಳಿಗೆ ಮೀಸಲಿಡಲು ನಿರ್ಧರಿಸಲಾಗುವುದು ಎಂದರು.

ಕೊರೊನಾ ಮೂರನೇ ಅಲೆಯಲ್ಲಿ ಹೆಚ್ಚಾಗಿ ಮಕ್ಕಳಿಗೆ ಬರುವ ಸಾಧ್ಯತೆಯನ್ನು ಹಿಂದೆಯೇ ತಜ್ಞರು ಹೇಳಿದ್ದರು. ಈಗಾಗಲೇ ಉಡುಪಿ ಮತ್ತು ಹಾವೇರಿ ಜಿಲ್ಲೆಯಲ್ಲಿ ವಾತ್ಸಲ್ಯ ಯೋಜನೆ ಆರಂಭಿಸಲಾಗಿದೆ. ಮಕ್ಕಳನ್ನು ಸಂಪೂರ್ಣ ತಪಾಸಣೆ ನಡೆಸುವುದು ಮತ್ತು ಮಕ್ಕಳ ಆರೋಗ್ಯ ಶಿಬಿರ ನಡೆಸಲು ನಿರ್ಧರಿಸಲಾಗಿದೆ. ಪೌಷ್ಟಿಕ ಕೊರತೆ ಇರುವ ಮಕ್ಕಳಿಗೂ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಸಮಸ್ಯೆ ಇದ್ದರೆ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲು ಸೂಚಿಸಲಾಗಿದೆ. 9, 10 ಮತ್ತು ಪಿಯುಸಿ ತರಗತಿಗಳನ್ನು ಪರ್ಯಾಯ ವ್ಯವಸ್ಥೆ ಮಾಡಿ ಆರಂಭಿಸಲು ಈಗಾಗಲೇ ಚಿಂತಿಸಲಾಗಿದ್ದು, ಅದರ ಪ್ರಗತಿ ನೋಡಿ ಮುಂದೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಸಿಎಂ ಬೊಮ್ಮಾಯಿ

ಕೊರೊನಾ ಒಂದನೇ ಮತ್ತು ಎರಡನೇ ಅಲೆ ಕೇರಳ ಮತ್ತು ಮಹಾರಾಷ್ಟ್ರದಿಂದ ವ್ಯಾಪಿಸಿತ್ತು. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ನಮ್ಮ ಜನರಿಗೆ ತೊಂದರೆಯಾಗಬಾರದೆಂದು ಪಕ್ಕದ ರಾಜ್ಯದಿಂದ ಬರುವವರು ಟೆಸ್ಟ್ ಮಾಡಿಕೊಂಡು ಬರಬೇಕು. ಎರಡು ಡೋಸ್ ಆಗಿದ್ದರೂ 72 ಗಂಟೆಗಳ ಒಳಗಿನ ಆರ್​ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಇರಬೇಕು ಎಂದು ಸಿಎಂ ಹೇಳಿದ್ರು.

ಸತೀಶ್ ರೆಡ್ಡಿ ಮನೆ ಮೇಲೆ ದಾಳಿ ಮಾಡಿದವರನ್ನು ಶೀಘ್ರ ಬಂಧಿಸುತ್ತೇವೆ:

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಗೆ ದಾಳಿ ಮಾಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ. ರಾತ್ರಿ 3 ಗಂಟೆಗೆ ಕಮೀಷನರ್, ಡಿಸಿಪಿ ಹೋಗಿ ಪರಿಶೀಲಿಸಿದ್ದಾರೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಮತ್ತು ಮುಂದೆ ಇಂತಹ ಘಟನೆಗಳು ಜರುಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಎರಡು ಡೋಸ್ ಲಸಿಕೆ ಪಡೆದವರಿಗೆ ಸೋಂಕು ತಗುಲಿದರೂ ತೀವ್ರತೆ ಕಡಿಮೆ ಇರುತ್ತದೆ. ಐಸಿಯುವಿಗೆ ಹೋಗುವ ಪರಿಸ್ಥಿತಿ ಬರುವುದಿಲ್ಲ ಎಂದರು.

ವೆನ್ಲಾಕ್​​ನಲ್ಲಿ ನೂತನ ಐಸಿಯು ಘಟಕ ಉದ್ಘಾಟನೆ:

ದ.ಕ ಜಿಲ್ಲಾಸ್ಪತ್ರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದಲ್ಲಿ ನೂತನ ಐಸಿಯು ಘಟಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್.ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ, ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ಸೇರಿ ಮೊದಲಾದವರು ಉಪಸ್ಥಿತರಿದ್ದರು.

Last Updated : Aug 12, 2021, 2:05 PM IST

ABOUT THE AUTHOR

...view details