ಮಂಗಳೂರು: ರಾಜ್ಯದ ಪ್ರತಿ ಜಿಲ್ಲೆ ಮತ್ತು ನಗರ ವ್ಯಾಪ್ತಿಯಲ್ಲಿ ಇಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆ ಇರುತ್ತದೆ. ಮಾದಕ ದ್ರವ್ಯದಂತಹ ಜಾಲದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಚಿಸಲಾಗಿರುವ ಈ ಠಾಣೆಯ ಸಮರ್ಪಕ ಕಾರ್ಯದಿಂದ ಇತ್ತೀಚೆಗೆ ಮಂಗಳೂರಿನಲ್ಲಿ ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಸ್ಯಾಂಡಲ್‌ವುಡ್ ಡ್ರಗ್ ದಂಧೆ ಬೆಳಕಿಗೆ ಬಂದ ಸಂದರ್ಭದಲ್ಲಿ ಮಂಗಳೂರಿನಲ್ಲಿಯೂ ಪೊಲೀಸರು ಈ ದಂಧೆಯ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ, ಬಾಲಿವುಡ್ ನಟ ಸೇರಿದಂತೆ ಹಲವು ಮಾದಕ ವ್ಯಸನಿಗಳು ಮತ್ತು ಪೆಡ್ಲರ್‌ಗಳು ಖಾಕಿ ಬಲೆಗೆ ಬಿದ್ದಿದ್ದರು. ನಗರದಲ್ಲಿ ಇಎನ್ಸಿಪಿ ಇತ್ತೀಚೆಗೆ ಹಲವು ಗಾಂಜಾ, ಡ್ರಗ್ ಪ್ರಕರಣಗಳ ಬೆನ್ನು ಬಿದ್ದು ಮಾದಕ ದ್ರವ್ಯ ಚಟುವಟಿಕೆಗೆ ಬ್ರೇಕ್ ಹಾಕಿದೆ. ಇದಕ್ಕೆ ಕಾರಣ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್. ಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಿದ ಇವರು ಕೂಡಲೇ ಅಗತ್ಯ ಸಿಬ್ಬಂದಿ ನಿಯೋಜಿಸಿ ಶಕ್ತಿಶಾಲಿ ತಂಡ ರಚಿಸಿದ್ದಾರೆ.