ಮಂಗಳೂರು :ಕುಮ್ಕಿ, ಬಾಣೆ ಭೂಮಿಯನ್ನು ರೈತರಿಗೆ ನೀಡುವ ಬಗ್ಗೆ ಸರಕಾರದಿಂದ ಚಿಂತನೆ ನಡೆಸಲಾಗುತ್ತಿದೆ. ಒತ್ತುವರಿ ಭೂಮಿಯನ್ನು ರೈತರಿಗೆ 30 ವರ್ಷಗಳ ಲೀಸ್‌ಗೆ ನೀಡುವ ಗುರಿಯಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ದ.ಕ. ಜಿಪಂ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಶಿಶುಪಾಲನಾ ಕೇಂದ್ರ ಹಾಗೂ ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ನೇತ್ರಾವತಿ ಸಭಾಂಗಣದಲ್ಲಿ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೂಪರಿವರ್ತನೆ ತ್ವರಿತಗೊಳಿಸಲು ಸರಕಾರದ ಹಂತದಲ್ಲಿ ಸೂಕ್ತ ಕ್ರಮಕೈಗೊಳ್ಳುವಂತಾಗಬೇಕು ಎಂದು ಹೇಳಿದರು. ದ.ಕ. ಜಿಲ್ಲೆ ಹಾಗೂ ಉಡುಪಿಯಲ್ಲಿ ಆರಂಭವಾಗಿರುವ ಕಡತ ವಿಲೇವಾರಿ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.
ಕಡತ ವಿಲೇವಾರಿ ಅಭಿಯಾನದ ಮೂಲಕ ಜಡತ್ವ ಹಿಡಿದಿರುವ ಸರಕಾರದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುತ್ತದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿಯಿಂದ ಜನರಿಗೆ ತೊಂದರೆಯಾಗಬಾರದು.
ಬಡವರು, ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು. ಜೊತೆಗೆ ಸರಕಾರಿ ಸೌಲಭ್ಯ ಪಡೆಯಲು ಫಲಾನುಭವಿಗಳು ಅಲೆದಾಡಬಾರದೆಂಬ ಉದ್ದೇಶದಿಂದ ಈ ಕಡತ ವಿಲೇವಾರಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಆರ್.ಅಶೋಕ್ ಹೇಳಿದರು.
ಕಂದಾಯ ಸಚಿವ ಆರ್.ಅಶೋಕ್ ತಮ್ಮ ಇಲಾಖೆಯ ಕುರಿತಂತೆ ಮಾಹಿತಿ ನೀಡುತ್ತಿರುವುದು.. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಕಡತ ವಿಲೇವಾರಿಯಾಗದೆ ಸರಕಾರಿ ಅಧಿಕಾರಿಗಳ ಟೇಬಲ್‌ಗಳಲ್ಲಿ ಬಾಕಿ ಉಳಿದಿರುವ 82 ಸಾವಿರ ಕಡತ ವಿಲೇವಾರಿ ಮಾಡುವ ಗುರಿ ಇದೆ.
ಇಂದಿನಿಂದ ಮುಂದಿನ 10 ದಿನಗಳ ಕಾಲ ಗ್ರಾಮ ಪಂಚಾಯತ್‌ನಿಂದ ತೊಡಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಕಡತ ವಿಲೇವಾರಿ ಅಭಿಯಾನ ಕೈಗೊಳ್ಳಲಾಗಿದೆ. ಯಾವ ಅಧಿಕಾರಿಯೂ ಈ ಕಾಲಾವಧಿಯಲ್ಲಿ ರಜೆ ಮಾಡುವಂತಿಲ್ಲ.
ಕನಿಷ್ಠ ಒಂದು ಗಂಟೆಯಾದರೂ ಹೆಚ್ಚುವರಿ ಕೆಲಸ ಮಾಡಬೇಕು. ಹಾಗೆಯೇ ತಮ್ಮ ತಮ್ಮ ಕಚೇರಿಯಲ್ಲಿ ಬಾಕಿ ಉಳಿದಿರುವಂತಹ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆನ್ನುವುದು ಕಡತ ವಿಲೇವಾರಿಯ ಉದ್ದೇಶ ಎಂದು ಹೇಳಿದರು.
ಓದಿ :ಲಷ್ಕರ್-ಇ-ತೊಯ್ಬಾಗೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಐಪಿಎಸ್ ಅಧಿಕಾರಿ ಬಂಧನ