ಮಂಗಳೂರು:ರಾಜ್ಯದ ಮುಖ್ಯಮಂತ್ರಿ ಹಾಗೂ ಜನಪ್ರತಿನಿಧಿಗಳನ್ನು ಕರೆದು ಕೋವಿಡ್ ನಿಯಂತ್ರಣ ಸಭೆ ನಡೆಸಿ ರಾಜ್ಯಪಾಲರು ನಿರ್ದೇಶಿಸಿದ್ದಾರೆಂದರೆ ಇದೀಗ ಇರುವ ಸರ್ಕಾರ ಜೀವಂತವಾಗಿದೆಯೇ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೊಂದು ಸತ್ತ ಸರ್ಕಾರ. ರಾಜ್ಯಪಾಲರಿಗೆ ರಾಜಕೀಯ ಪಕ್ಷಗಳ ಸೇರಿ ನಿರ್ದೇಶನ ಮಾಡುವ ಅಧಿಕಾರ ಇಲ್ಲ. ಇದರಿಂದ ಅವರು ನಗೆಪಾಟಲಿಗೀಡಾಗುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಚುನಾಯಿತ ಸರ್ಕಾರ ಇಲ್ಲದಿದ್ದಾಗ ಮಾತ್ರ ರಾಜ್ಯಪಾಲರು ಮಧ್ಯಪ್ರವೇಶಿಸಲು ಅವಕಾಶವಿದೆ. ಈಗ ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಇಲ್ಲವೇ? ಆದ್ದರಿಂದ ಈಗ ಪ್ರಜಾಪ್ರಭುತ್ವ ಸರ್ಕಾರ ಬದುಕಿಯೂ ಸತ್ತಂತಿದೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಆದರೂ ಸಾಂಕ್ರಾಮಿಕ ರೋಗ ಉಲ್ಬಣ ಆಗಿರುವ ಈ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಸಹಕರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಕೊರತೆಯಿದ್ದು, ಈ ಮೂಲಕ ಜಿಲ್ಲೆಯ ಶಾಸಕರು, ಮಂತ್ರಿಗಳು ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆಯನ್ನು ಸಂಗ್ರಹಿಸಿಡಲು ವಿಫಲರಾಗಿದ್ದಾರೆ. ಉಸ್ತುವಾರಿ ಮಂತ್ರಿ ಮಾತನಾಡುವುದೇ ಇಲ್ಲ. ಶಾಸಕರು ಜನರ ಆರೋಗ್ಯ ಕಾಳಜಿ ಮರೆತು ಗುದ್ದಲಿ ಪೂಜೆಯಲ್ಲಿಯೇ ಇದ್ದಾರೆ. ಅಸಂಘಟಿತ ಕಾರ್ಮಿಕರು ನಿನ್ನೆಯಿಂದ ವಲಸೆ ಹೋಗುತ್ತಿದ್ದು, ವಾರಂತ್ಯ ಬಂದ್ ಮಾಡುವುದಕ್ಕಾಗಿ ಅದರ ಸಂಬಳ ನೀಡಬೇಕು ಎಂದು ಐವನ್ ಡಿಸೋಜ ಆಗ್ರಹಿಸಿದರು.
ಅದಾಗದಿದ್ದಲ್ಲಿ ಜಿಲ್ಲಾಡಳಿದಲ್ಲಿ 10 ಕೋಟಿ ರೂ. ಇದ್ದು, ಅದನ್ನೇ ನೌಕರರಿಗೆ ನೀಡಿ, ಅವರು ವಲಸೆ ಹೋಗದಂತೆ ತಡೆಯಲಿ. ಅಲ್ಲದೆ ಅವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆಯಾಗಲಿ. ಬಾಯಿ ಮಾತಿನಲ್ಲಿ ಲಾಕ್ಡೌನ್ ಇಲ್ಲ ಎಂದು ಹೇಳಿದ್ದರೂ ವರ್ಚುವಲಿ ಲಾಕ್ಡೌನ್ ಮಾಡಲಾಗುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.