ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಸರಣಿ ಹತ್ಯೆಗಳ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅದು ಯಾವುದೇ ವ್ಯಕ್ತಿ, ಸಂಘಟನೆ, ಸಿದ್ದಾಂತ ಇರಲಿ ಅವರನ್ನು ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲು ಮಂಗಳೂರಿಗೆ ಬಂದಿದ್ದ ವೇಳೆ ಮಾತನಾಡಿದ ಅವರು, ಮೂರೂ ಪ್ರಕರಣಗಳ ಅಪರಾಧಿಗಳನ್ನು ಪತ್ತೆ ಮಾಡುತ್ತೇವೆ. ಅದರಲ್ಲಿ ಯಾರು ಭಾಗಿಯಾಗಿದ್ದರೂ ಸರಿ, ಸಂಸ್ಥೆ, ವ್ಯಕ್ತಿ, ಸಿದ್ದಾಂತ ಎಂದು ನೋಡದೇ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಮಾಜದಲ್ಲಿ ಯಾರಾದರೂ ಅಪರಾಧ ನೋಡಿದವರು, ಗೊತ್ತಿದ್ದವರು, ಮಾಹಿತಿ ಇದ್ದವರು ಇರುತ್ತಾರೆ. ಮಾಹಿತಿ ಇರುವ ನಾಗರಿಕರು ಪೊಲೀಸರಿಗೆ ಮಾಹಿತಿ ಕೊಟ್ಟರೆ ಆರೋಪಿಗಳನ್ನು ಶೀಘ್ರ ಬಂಧಿಸಲು ಸಹಾಯವಾಗುತ್ತದೆ. ಮಾಹಿತಿ ಗೊತ್ತಿದ್ದು, ಕೊಡಲಿಲ್ಲವೆಂದರೆ ಅವರು ಭಾಗಿ ಎಂದು ನಿರ್ಧರಿಸಬೇಕಾಗುತ್ತದೆ ಎಂದು ಪ್ರವೀಣ್ ಸೂದ್ ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದರು.