ಮಂಗಳೂರು:ಕರಾವಳಿಯ ಪ್ರಮುಖ ದೇವಾಲಯವಾದ ಕಟೀಲು ಕ್ಷೇತ್ರದಲ್ಲಿ ಶಾಂತಿ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟು ಬುಧವಾರ ಮಧ್ಯಾಹ್ನದ ಪೂಜೆಯೇ ವಿಳಂಬವಾಗಿ ನಡೆದ ಘಟನೆ ನಡೆದಿದೆ. ಈ ವಿವಾದದ ಬಗ್ಗೆ ಚರ್ಚೆ ಆರಂಭವಾಗಿ ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಪೂಜೆ 2 ಗಂಟೆಗೆ ನೇರವೇರಿತು.
ಕಟೀಲು ದೇವಸ್ಥಾನದ ಕೀಳು ಶಾಂತಿ ಹಕ್ಕಿನ ಬಗ್ಗೆ ರಾಜ್ಯ ಮುಜರಾಯಿ ಇಲಾಖೆಯ ಕೋರ್ಟ್‌ನಲ್ಲಿ ಕೆಲವು ವರ್ಷಗಳಿಂದ ವ್ಯಾಜ್ಯ ವಿಚಾರಣೆಯಲ್ಲಿತ್ತು. ಇತ್ತೀಚೆಗೆ ಆನುವಂಶಿಕ ಕೀಳು ಶಾಂತಿ ಹುದ್ದೆಯನ್ನು ಮರುಸ್ಥಾಪಿಸಿ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರು ಆದೇಶ ನೀಡಿದ್ದು, ಅದರಂತೆ ಈ ಹುದ್ದೆಯನ್ನು ವಹಿಸಿಕೊಳ್ಳುವ ಬಗ್ಗೆ ಗುರುರಾಜ್ ಭಟ್ ಮತ್ತು ಮುರಳೀಧರ ಉಪಾಧ್ಯಾಯ ಕಟೀಲು ದೇವಸ್ಥಾನದ ಆನುವಂಶಿಕ ಮೊಕ್ತೇಸರರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಬುಧವಾರ ಮಧ್ಯಾಹ್ನ ಮತ್ತೆ ಕ್ಷೇತ್ರದಲ್ಲಿ ಚರ್ಚೆಗಳು ನಡೆದು ಮಧ್ಯಾಹ್ನ ಪೂಜೆಯೇ ವಿಳಂಬವಾಗಿತ್ತು.