ಮಂಗಳೂರು:ಕರಾವಳಿಯಲ್ಲಿ ಅಕ್ರಮ ಗೋ ಸಾಗಾಟಕ್ಕೆ ಪೂರ್ಣವಿರಾಮ ಹಾಕಲು, ಅಕ್ರಮ ಗೋ ಸಾಗಾಟ ಮಾಡುವವರನ್ನು ಪತ್ತೆ ಹಚ್ಚಲು ಮುಸ್ಲಿಂ ಸಮುದಾಯದಲ್ಲೇ ತಂಡವೊಂದು ಸಿದ್ಧವಾಗುತ್ತಿದೆ. ಈ ಮೂಲಕ ತಮ್ಮ ಮೇಲಿರುವ ಆರೋಪವನ್ನು ಕೊನೆಗಾಣಿಸಲು ಮುಸ್ಲಿಂ ಯೂತ್ ಲೀಗ್ ಎಂಬ ಸಂಘಟನೆ ತೀರ್ಮಾನಿಸಿದೆ.
ಈ ಕುರಿತಾಗಿ ಇರುವ ಹಿಂದೂ ಸಂಘಟನೆಗಳ ಮಾದರಿಯ ಗೋರಕ್ಷಕಾ ದಳದಂತೆ 'ಅಕ್ರಮ ಗೋ ಸಾಗಾಟ ವಿರೋಧ ಸಮಿತಿ' ಎಂಬ ಹೆಸರಿನಲ್ಲಿ ಈ ಸಂಘಟನೆ ಕಾರ್ಯಾಚರಿಸಲಿದ್ದು, ಮುಸ್ಲಿಂ ಯೂತ್ ಲೀಗ್ ಸಂಘಟನೆಯ ಸದಸ್ಯರು ಈ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಈ ಸಂಘಟನೆಯಲ್ಲಿ ಇತರ ಮುಸ್ಲಿಂ ಯುವಕರಿಗೂ ಸದಸ್ಯರಾಗಲು ಅವಕಾಶವಿದೆ. ಈ ತಂಡಗಳು ದ.ಕ ಜಿಲ್ಲೆಯ ವಿವಿಧೆಡೆಯಲ್ಲಿ ನಡೆಯುವ ಅಕ್ರಮ ಗೋ ಸಾಗಾಟ ಪ್ರಕರಣಗಳನ್ನು ಪತ್ತೆ ಹಚ್ಚಿ ಪೊಲೀಸರಿಗೆ ಸಹಕರಿಸುವ ಆಕಾಂಕ್ಷೆ ಹೊಂದಿದೆ.
ಈ ಬಗ್ಗೆ ಮುಸ್ಲಿಂ ಯೂತ್ ಲೀಗ್ನ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಅಕ್ರಮ ಗೋ ಸಾಗಾಟ, ಸತ್ತ ಗೋವುಗಳ ಮಾಂಸ, ಅಂಗವಿಕಲ ಗೋವುಗಳ ಮಾಂಸ ಭಕ್ಷಣೆ, ಮುಸ್ಲಿಂ ಸಂಸ್ಕೃತಿಯಲ್ಲಿ ನಿಷೇಧಿಸಲ್ಪಟ್ಟಿದೆ. ಆದರೆ ಅಂತಹ ಮಾಂಸಗಳನ್ನು ಅಮಾಯಕ ಮುಸ್ಲೀಮರಿಗೆ ತಿನ್ನಿಸುವ ವಿಚಾರ ಖಂಡನೀಯ. ಆದ್ದರಿಂದ ಜಿಲ್ಲಾಡಳಿತ ಯಾರೆಲ್ಲಾ ಇಂತಹ ಅಕ್ರಮ ಗೋಸಾಗಾಟದಲ್ಲಿ ತೊಡಗುತ್ತಾರೋ, ಅವರಿಗೆ ಕಠಿಣ ಶಿಕ್ಷೆ ನೀಡದ ಕಾರಣ, ಅನಿವಾರ್ಯವಾಗಿ ನಾವು ಬೀದಿಗಿಳಿಯುವ ಪರಿಸ್ಥಿತಿ ಒದಗಿದೆ ಎಂದು ಹೇಳಿದರು.
ಮುಸ್ಲಿಂ ಯೂತ್ ಲೀಗ್ನ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿದರು. ಜಿಲ್ಲಾದ್ಯಂತ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರಥಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಡ ರಚಿಸಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಬಳಿಕ ಇತರ ಜಿಲ್ಲೆಗಳು ಹಾಗೂ ರಾಜ್ಯಾದ್ಯಂತ ಈ ತಂಡವನ್ನು ರಚಿಸುವ ಉದ್ದೇಶ ಇರಿಸಿಕೊಂಡಿದ್ದೇವೆ. ಯಾರೋ ದನ ತುಂಬಿಸಿಕೊಂಡು ಬರುವವನನ್ನು ಹೊಡೆದು ಬಡಿದು ಮಾಡುವುದಕ್ಕಿಂತ ಇದರ ಮೂಲವನ್ನು ಹುಡುಕಿ ಅಲ್ಲಿಯೇ ಹಿಂಸಾತ್ಮಕ ಗೋಸಾಗಾಟ ನಿಲ್ಲಿಸುವ ಉದ್ದೇಶ ನಮ್ಮಲ್ಲಿದೆ ಎಂದು ಸಿದ್ದೀಕ್ ತಲಪಾಡಿ ಹೇಳಿದ್ದಾರೆ.