ಮಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಮುಖಂಡ ಬೆಳ್ತಂಗಡಿ ನಿವಾಸಿ ಪಿ ಡೀಕಯ್ಯ ಅವರ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪದ್ಮುಂಜದಲ್ಲಿ ದಫನ ಮಾಡಿದ್ದ ಡೀಕಯ್ಯ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಮ್ ಅವರ ಉಪಸ್ಥಿತಿಯಲ್ಲಿ ಇಂದು ಡೀಕಯ್ಯ ಅವರ ಮೃತದೇಹವನ್ನು ಹೊರತೆಗೆಯಲಾಯಿತು.
ಮೆದುಳಿನ ರಕ್ತಸ್ರಾವದಿಂದ ಜು. 8 ರಂದು ಪಿ ಡೀಕಯ್ಯ ಅವರು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು ಎಂದು ಹೇಳಲಾಗಿತ್ತು. ಡೀಕಯ್ಯ ಮನೆಯಲ್ಲಿ ಒಬ್ಬರೆ ಇದ್ದು, ಅವರ ಪತ್ನಿ ಪದ್ಮುಂಜದ ಮನೆಯಲ್ಲಿದ್ದ ದಿನ ಡೀಕಯ್ಯ ಅವರು ಗರ್ಡಾಡಿಯ ಮನೆಯಲ್ಲಿ ಅಸ್ವಸ್ಥರಾಗಿದ್ದರು. ಬೆಳಗ್ಗೆ ಮನೆಯವರು ಬಂದಾಗ ಇವರ ಮನೆಯ ಬಾಗಿಲು ಹಾಕಿದ್ದವು. ಬಾಗಿಲು ತೆಗೆಯದ ಕಾರಣ ಮನೆಯ ಬಾಗಿಲನ್ನು ಒಡೆದು ಒಳಗೆ ಹೋದಾಗ ಅವರು ಅಡುಗೆ ಮನೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ಕೂಡಲೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.