ಸುಳ್ಯ(ದಕ್ಷಿಣ ಕನ್ನಡ):ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರವೊಂದಕ್ಕೆ ಹಂದಿ ಫಾರ್ಮ್ ಒಂದರಿಂದ ಅಪಚಾರವಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಗುಡಿಯ ಪಕ್ಕದಲ್ಲೇ ಈ ಹಂದಿ ಫಾರ್ಮ್ ಕಾರ್ಯಾಚರಿಸುತ್ತಿದೆ. ಇದರಿಂದಾಗಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹಂದಿ ಫಾರ್ಮ್ನಿಂದ ದೇವಸ್ಥಾನ ಅಪವಿತ್ರವಾಗುತ್ತಿದೆಯೆನ್ನುವ ಆರೋಪ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಹೊಸತೋಟ ಎಂಬಲ್ಲಿನ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಸ್ಥಳೀಯ ವ್ಯಕ್ತಿಯೋರ್ವರು ಹಂದಿಯ ಫಾರ್ಮ್ ಆರಂಭಿಸಿದ್ದು, ಈ ಫಾರ್ಮ್ ಆರಂಭಕ್ಕೂ ಮೊದಲೇ ಸ್ಥಳೀಯರು ಆಕ್ಷೇಪ ಸಲ್ಲಿಸಿದ್ದರು ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಂದಿ ಫಾರ್ಮ್ ಅನ್ನು ಅಕ್ರಮವಾಗಿ ನಡೆಸುತ್ತಿರುವ ವ್ಯಕ್ತಿಯ ಪರವಾಗಿ ಗ್ರಾಮ ಪಂಚಾಯತ್ ಆಡಳಿತ ಕಾರ್ಯಾಚರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತೋಡಿಕಾನದ ಹೊಸತೋಟದ ನಿವಾಸಿಯಾಗಿರುವ ಜಗದೀಶ್ ಎನ್ನುವವರು ಕಳೆದ ಎರಡು ತಿಂಗಳ ಹಿಂದೆ ಈ ಹಂದಿ ಫಾರ್ಮ್ ಅನ್ನು ಪ್ರಾರಂಭಿಸಿದ್ದು, ಸುಮಾರು 150ಕ್ಕೂ ಹೆಚ್ಚು ಹಂದಿಗಳನ್ನು ಇಲ್ಲಿ ಸಾಕಲಾಗುತ್ತಿದೆ. ಈ ಹಂದಿಗಳಿಗೆ ತಿನ್ನಲು ಕೊಳೆತ ವಸ್ತುಗಳನ್ನು ಇಲ್ಲಿ ಶೇಖರಿಸಲಾಗುತ್ತಿದ್ದು, ಇದರ ದುರ್ನಾತದ ಜೊತೆಗೆ ಹಂದಿಗಳಿರುವ ತೊಟ್ಟಿಯನ್ನು ತೊಳೆಯುವ ನೀರಿನ ದುರ್ನಾತ ಇಡೀ ಗ್ರಾಮದ ತುಂಬೆಲ್ಲ ಹರಡುತ್ತಿದೆ. ಪಕ್ಕದಲ್ಲಿರುವ ಮನೆ ಮಂದಿಗೆ ಮನೆಯಲ್ಲಿ ಕುಳಿತುಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ಹಂದಿ ಫಾರ್ಮ್ನ ಕೊಳಚೆ ನೀರನ್ನು ಪೈಪ್ ಮೂಲಕ ಸಾಗಿಸಿ ತೋಡಿಕಾನದ ಪುರಾತನ ದೇವಸ್ಥಾನವಾದ ಮಲ್ಲಿಕಾರ್ಜುನ ಸ್ವಾಮಿಯ ದರ್ಪಣ ತೀರ್ಥದ ಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಇನ್ನೊಂದೆಡೆ ಈ ಫಾರ್ಮ್ನ ಪಕ್ಕದಲ್ಲೇ ಕ್ಷೇತ್ರಕ್ಕೆ ಸಂಬಂಧಪಟ್ಟ ರಕ್ತೇಶ್ವರಿ ದೇವಿ ಹಾಗೂ ನಾಗದೇವರ ಗುಡಿಯಿದ್ದು, ಈ ಫಾರ್ಮ್ನಿಂದಾಗಿ ಈ ಗುಡಿಗಳು ಅಪವಿತ್ರವಾಗುತ್ತಿದೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ. ಈ ಸಂಬಂಧ ದೇವಸ್ಥಾನದ ವತಿಯಿಂದಲೂ ಆಕ್ಷೇಪದ ಮನವಿಯನ್ನು ಸಲ್ಲಿಸಲಾಗಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಸ್ನೇಹಿತರ ನಡುವೆ ಗಲಾಟೆ.. ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಓರ್ವನ ಕೊಲೆ
ಹಂದಿ ಫಾರ್ಮ್ ಕಾರ್ಯಾಚರಿಸುತ್ತಿರುವ ಜಾಗವು ಸರ್ಕಾರಿ ಜಾಗವಾಗಿದ್ದು, ಇಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಕೃಷಿಗೆ ಸಂಬಂಧಪಟ್ಟ ವಿದ್ಯುತ್ ಸಂಪರ್ಕವನ್ನೂ ಈ ಫಾರ್ಮ್ಗೆ ಅಳವಡಿಸುವ ಮೂಲಕ ಅಕ್ರಮ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಈ ಸಂಬಂಧ ಈಗಾಗಲೇ ಅರಂತೋಡು ಗ್ರಾಮಪಂಚಾಯತ್ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ಈವರೆಗೂ ಯಾವುದೇ ಕ್ರಮ ಜಾರಿಯಾಗಿಲ್ಲ ಎಂಬುದು ಸ್ಥಳೀಯರ ಮಾತು.
ಜನವಸತಿ ಇರುವ ಪ್ರದೇಶದಲ್ಲಿ ಹಂದಿ ಫಾರ್ಮ್ ಪ್ರಾರಂಭಿಸುವ ಮೊದಲು ಸ್ಥಳೀಯರ ಗಮನಕ್ಕೂ ತರದೆ, ಇದೀಗ ಇಡೀ ಊರಿಗೆ ದುರ್ನಾತ ಬೀರುತ್ತಿರುವ ಈ ಹಂದಿ ಫಾರ್ಮ್ ಮುಚ್ಚಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.