ಮಂಗಳೂರು:ಮಂಕಿಪಾಕ್ಸ್‌ಗೆ ಕಡಿವಾಣ ಹಾಕಲು ಏರ್‌ಲೈನ್ಸ್ ಸಿಬ್ಬಂದಿ ವಿಮಾನ ಲ್ಯಾಂಡಿಂಗ್ ಆಗುವ ಮೊದಲೇ ವಿಮಾನದಲ್ಲಿ ಜ್ವರ ಹಾಗೂ ಚರ್ಮದ ಗುಳ್ಳೆಗಳು ಇರುವವರನ್ನು ಪತ್ತೆ ಹಚ್ಚಬೇಕು. ಆ ಲಕ್ಷಣ ಉಳ್ಳವರು ಕಂಡುಬಂದರೆ ಅವರನ್ನು ಪ್ರತ್ಯೇಕಿಸಬೇಕು ಹಾಗೂ ವಿಮಾನ ನಿಲ್ದಾಣದಲ್ಲಿರುವ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹೊರವಲಯದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾನ್ಪರೆನ್ಸ್ ಹಾಲ್‍ನಲ್ಲಿ ಮಂಕಿಪಾಕ್ಸ್ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ನಿರ್ದೇಶನ ನೀಡಿದ್ದಾರೆ.
ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾದ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿ, ಕೇರಳದ ಹೆಚ್ಚಿನ ಪ್ರಯಾಣಿಕರು ಮಂಗಳೂರಿನ ವಿಮಾನ ನಿಲ್ದಾಣದಿಂದ ಕೇರಳಕ್ಕೆ ರಸ್ತೆ ಮಾರ್ಗವಾಗಿ ಸಂಚರಿಸುವುದರಿಂದ, ಮಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಂಕಿಪಾಕ್ಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
- ವಿಮಾನದಲ್ಲಿ ಪ್ರಯಾಣಿಕರಿಗೆ ಆಗಿಂದಾಗ್ಗೆ ಇದರ ಬಗ್ಗೆ ಮನವರಿಕೆ ಮಾಡಬೇಕು. ವಿಮಾನ ಲ್ಯಾಂಡಿಂಗ್ ಆದ ತಕ್ಷಣ ಪ್ರಯಾಣಿಕರನ್ನು ಮೇಲ್ವಿಚಾರಣೆ ಮಾಡುವ ಸಿಬ್ಬಂದಿ ಜ್ವರ ಹಾಗೂ ಚರ್ಮದ ಗುಳ್ಳೆಯ ಬಗ್ಗೆ ಪ್ರಯಾಣಿಕರಿಂದ ಖಚಿತ ಪಡಿಸಿಕೊಳ್ಳಬೇಕು.
- ಸಂಶಯಾಸ್ಪದ ರೋಗ ಲಕ್ಷಣಗಳಿರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ಆ್ಯಂಬುಲೆನ್ಸ್ನಲ್ಲಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ತೆರೆಯಲಾದ ಮಂಕಿಪಾಕ್ಸ್ ಐಸೋಲೇಶನ್ ವಾರ್ಡ್ಗೆ ದಾಖಲಿಸಬೇಕು.
- ಮಂಕಿಪಾಕ್ಸ್ ಹರಡದಂತೆ ಜಾಗೃತಿ ಮೂಡಿಸುವ ಕನ್ನಡ, ಇಂಗ್ಲೀಷ್, ಮಲಯಾಳಂ, ಹಿಂದಿ, ಭಾಷೆಯಲ್ಲಿ ಐಇಸಿ ಸ್ಟ್ಯಾಂಡ್‌ಗಳನ್ನು ಸಿದ್ದಪಡಿಸಲು ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ನೀಡಬೇಕು.
- ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಟ್ಯಾಂಡ್‌ಗಳನ್ನು ತಯಾರಿಸಿ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಶಿಸಬೇಕು.
- ಮಂಕಿಪಾಕ್ಸ್ ಜಾಗೃತಿ ಮೂಡಿಸುವ ವಿವಿಧ ಫೋಟೋಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿ ವಾಟ್ಸ್ ಆ್ಯಪ್ ಗ್ರೂಪ್‍ನಲ್ಲಿ ಶೇರ್ ಮಾಡಬೇಕು.
- ಮಂಕಿಪಾಕ್ಸ್ ಬಗ್ಗೆ ಕ್ಯಾಬ್ ಚಾಲಕರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಅರಿವು ಮೂಡಿಸಬೇಕು.
- ವಿಮಾನ ನಿಲ್ದಾಣದ ಡಿಜಿಟಲ್ ಡಿಸ್‍ಪ್ಲೇಯಲ್ಲಿ ಹಾಗೂ ಮೈಕ್ ಮೂಲಕ ಅರಿವು ಮೂಡಿಸುವಂತೆ ಸೂಚಿಸಿದರು.
ಮಂಕಿಪಾಕ್ಸ್ ಹರಡದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನರು ಭಯಭೀತರಾಗದೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಇದನ್ನೂ ಓದಿ:ಮಂಕಿಪಾಕ್ಸ್ ಹೇಗೆ ಹರಡುತ್ತದೆ? ಇದೆಷ್ಟು ಅಪಾಯಕಾರಿ?