ಮಂಗಳೂರು:ಕೇರಳ ರಾಜ್ಯದ 441 ವಿದ್ಯಾರ್ಥಿಗಳು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಇದೀಗ ಆರಂಭಗೊಂಡಿದೆ. ಕೋವಿಡ್ ಸೋಂಕಿನ ಎರಡನೇ ಅಲೆಯ ಭೀತಿಯ ನಡುವೆಯೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಕೇರಳ ರಾಜ್ಯದ ಗಡಿ ಭಾಗದಿಂದ ಮಂಗಳೂರು ಸೇರಿದಂತೆ ಜಿಲ್ಲೆಯೊಳಗೆ ಇಂದಿನಿಂದ ಷರತ್ತು ಬದ್ಧವಾಗಿ ಬಸ್ ಸಂಚಾರ ಆರಂಭಗೊಂಡಿದೆ. ಅಲ್ಲದೇ, ರೈಲು ಸಂಚಾರದ ವ್ಯವಸ್ಥೆಯೂ ಇದ್ದು, ವಿದ್ಯಾರ್ಥಿಗಳಿಗೆ ದ.ಕ.ಜಿಲ್ಲೆಯೊಳಗಿನ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಯಾವುದೇ ತೊಂದರೆಯಿಲ್ಲ. ಆದರೂ ಅವರಿಗೆ ಪ್ರವೇಶ ಪತ್ರದ ಆಧಾರದಲ್ಲಿ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಪರೀಕ್ಷಾ ಸಾಮಗ್ರಿಗಳು, ನೀರಿನ ಬಾಟಲಿಗಳೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುತ್ತಿದ್ದು, ಪೋಷಕರಿಗೆ ಪರೀಕ್ಷಾ ಕೇಂದ್ರದ ಆವರಣ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ. ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮೊದಲು ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಸರ್, ಕಡ್ಡಾಯವಾಗಿ ಮಾಸ್ಕ್ ಧಾರಣೆ ಮಾಡಿಸಿಯೇ ಕಳುಹಿಸುತ್ತಿರುವುದು ಕಂಡು ಬಂತು.
ಅಲ್ಲದೇ, ಯಾರೂ ಗುಂಪು ಸೇರದಂತೆ ನಿಗಾ ವಹಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದೊಳಗೆ 12 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಕೋವಿಡ್ ಸೋಂಕಿತರಿದ್ದಲ್ಲಿ ಅವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ಉತ್ತರ - ದಕ್ಷಿಣ ಒಳನಾಡಿನಲ್ಲಿ ಇಂದು ಅತೀವ ಮಳೆ ಸಾಧ್ಯತೆ... 7 ಜಿಲ್ಲೆಗಳಲ್ಲಿ Red alert!