ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಕುಂಪಲದ ಚಿತ್ರಾಂಜಲಿ ನಗರದ ದಿವ್ಯಾಂಗ ವಿದ್ಯಾರ್ಥಿ ಅನ್ವಿತ್.ಜಿ ಕುಮಾರ್ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ದೃಷ್ಟಿ ಸಮಸ್ಯೆ ಹೊಂದಿರುವ ಅನ್ವಿತ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೊಲಿಟಿಕಲ್ ಸೈನ್ಸ್ನಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿದ್ದು, ಶೇ.82ರಷ್ಟು ಅಂಕ ಪಡೆದಿದ್ದಾರೆ. ಈ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಅತ್ಯಧಿಕ ಅಂಕ ಪಡೆದ ಮೊದಲ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.
6ನೇ ತರಗತಿಯಲ್ಲಿರುವಾಗ ( 12ನೇ ವಯಸ್ಸಿನಲ್ಲಿ) ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡ ಅನ್ವಿತ್‌ಗೆ ತಾಯಿಯೇ ಎರಡು ಕಣ್ಣುಗಳಂತೆ ಕೆಲಸ ಮಾಡಿದ್ದಾರಂತೆ. ಬಾಲ್ಯದಲ್ಲಿಯೇ ವಿದ್ಯೆಗೆ ಪ್ರೋತ್ಸಾಹಿಸುತ್ತಿದ್ದ ತಾಯಿಯ ಕಾರಣದಿಂದಲೇ ಪ್ರತಿ ತರಗತಿಯಲ್ಲಿಯೂ ಅತ್ಯುತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.