ಮಂಗಳೂರು:ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಾರು ಮಾಲೀಕ ಸೇರಿ 7 ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬಜ್ಪೆಯ ಸುಹಾಸ್ ಶೆಟ್ಟಿ (29), ಕುಳಾಯಿಯ ಮೋಹನ್ ಸಿಂಗ್ ಅಲಿಯಾಸ್ ನೇಪಾಲಿ ಮೋಹನ್ (26), ಗಿರಿಧರ್ (23), ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್ (21), ಶ್ರೀನಿವಾಸ್ (23), ದೀಕ್ಷಿತ್ (21) ಎಂದು ಗುರುತಿಸಲಾಗಿದೆ.
ನಡೆದಿದ್ದೇನು?:ಜುಲೈ 28 ರಂದು ಸುರತ್ಕಲ್ನಲ್ಲಿ ಫಾಜಿಲ್ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರದಂದು ಹತ್ಯೆಗೆ ಆರೋಪಿಗಳಿಗೆ ಕಾರು ನೀಡಿದ್ದ ಅಜಿತ್ ಕ್ರಾಸ್ತಾನನ್ನು ಪೊಲೀಸರ ಬಂಧಿಸಿದ್ದರು. ಇದೀಗ ಮತ್ತೆ ಆರು ಆರೋಪಿಗಳನ್ನು ಸಿಸಿಬಿ ಪೊಲೀಸರು ಇಂದು ನಸುಕಿನ ಜಾವ ಬಂಧಿಸಿದ್ದಾರೆ.
ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಜುಲೈ 26 ರಂದು ರಾತ್ರಿ ಆರೋಪಿ ಸುಹಾಸ್ ಶೆಟ್ಟಿ ಮತ್ತು ಅಭಿಷೇಕ್ ಯಾರನ್ನಾದರೂ ಕೊಲೆ ಮಾಡಬೇಕು ಎಂದು ದೂರವಾಣಿಯಲ್ಲಿ ಚರ್ಚಿಸಿದ್ದರು. ಮರುದಿನ ( ಜು.27 ) ಹೋಟೆಲ್ನಲ್ಲಿ ಮತ್ತೆ ಚರ್ಚೆ ಈ ಕೊಲೆ ಬಗ್ಗೆ ನಡೆಸಿದ್ದರು.
ಆಗ ಅವರಿಗೆ ಅಲ್ಲಿ ನೇಪಾಲಿ ಮೋಹನ್ ಭೇಟಿಯಾಗಿದ್ದಾನೆ. ಅವರಿಗೆ ತನ್ನ ಗೆಳೆಯರಾದ ಶ್ರೀನಿವಾಸ , ದೀಕ್ಷಿತ್, ಗಿರಿಧರನನ್ನು ಈ ಕೃತ್ಯದಲ್ಲಿ ಸೇರಿಸುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಹೋಟೆಲ್ನಲ್ಲಿ ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ ಯಾರನ್ನಾದರೂ ಕೊಲೆ ಮಾಡಬೇಕು ಎಂದು ಆರು ಜನರ ಹೆಸರನ್ನು ಪ್ರಸ್ತಾಪಿಸುತ್ತಾರೆ. ಆದರೆ, ಆ ವೇಳೆ ಯಾವುದೂ ಫೈನಲ್ ಆಗಿರಲಿಲ್ಲ. ಇದರ ಮಧ್ಯೆ ಮೋಹನ್ ಮತ್ತು ಗಿರಿಧರ್ ಕೃತ್ಯ ನಡೆಸಲು ಅಜಿತ್ ಕ್ರಾಸ್ತಾನಿಂದ ಕಾರು ತರುತ್ತಾರೆ. ಒಂದು ಬಹುದೊಡ್ಡ ಕೆಲಸವಿದೆ.
ಅದರಲ್ಲಿ ಯಶಸ್ಸು ಆದರೆ 3 ದಿನಕ್ಕೆ 15 ಸಾವಿರ ನೀಡುತ್ತೇವೆ ಎಂದು ಅಜಿತ್ ಕ್ರಾಸ್ತಾಗೆ ಆಮಿಷವೊಡ್ಡುತ್ತಾರೆ. ಅಷ್ಟೇ ಅಲ್ಲ ಆಗ ಅಜಿತ್ ಕ್ರಾಸ್ತಾಗೆ ಕಾರಿನ ಗುರುತು ಸಿಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಕಾರು ತಂದರೂ ಸಹ ಆ ದಿನ ಕೊಲೆ ಮಾಡಲು ಪ್ಲ್ಯಾನ್ ಆಗಿರಲಿಲ್ಲ. ಅವತ್ತು ಸುರತ್ಕಲ್ನಲ್ಲಿ ಸುಹಾಸ್ ಶೆಟ್ಟಿ, ಗಿರಿಧರ್, ಮೋಹನ್ ಹೊರತು ಪಡಿಸಿ ಉಳಿದವರು ಸಂಜೆಯಾದ್ರೂ ಸೇರಿರಲಿಲ್ಲ.