ಕರ್ನಾಟಕ

karnataka

ETV Bharat / city

ಹೆಚ್​ಡಿಕೆ ಅಧಿಕಾರ ಕಳೆದುಕೊಂಡ ಬಳಿಕ ಗಂಭೀರತೆ ಕಳೆದುಕೊಂಡಿದ್ದಾರೆ: ಶ್ರೀರಾಮುಲು - ಮಂಗಳೂರು ಶ್ರೀರಾಮುಲು ಸುದ್ದಿಗೋಷ್ಠಿ ನ್ಯೂಸ್​

ಮಾಜಿ ಸಿಎಂ ಕುಮಾರಸ್ವಾಮಿಯವರು ಅಧಿಕಾರ ಕಳೆದುಕೊಂಡ ಬಳಿಕ ಗಂಭೀರತೆ ಕಳೆದುಕೊಂಡಿದ್ದಾರೆ. ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೋ ಅದನ್ನು ಹಾಸ್ಯವಾಗಿ ಬಿಂಬಿಸುತ್ತಿದ್ದಾರೆ. ಯಾವುದನ್ನು ಹಾಸ್ಯವಾಗಿ ಬಿಂಬಿಸಬೇಕೋ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಂಗಳೂರಿನಲ್ಲಿ‌ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.

ಶ್ರೀರಾಮುಲು
Shri Ramulu

By

Published : Feb 6, 2020, 7:53 PM IST

ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರು ಅಧಿಕಾರ ಕಳೆದುಕೊಂಡ ಬಳಿಕ ಗಂಭೀರತೆ ಕಳೆದುಕೊಂಡಿದ್ದಾರೆ. ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೋ ಅದನ್ನು ಹಾಸ್ಯವಾಗಿ ಬಿಂಬಿಸುತ್ತಿದ್ದಾರೆ. ಯಾವುದನ್ನು ಹಾಸ್ಯವಾಗಿ ಬಿಂಬಿಸಬೇಕೋ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಂಗಳೂರಿನಲ್ಲಿ‌ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು

ಇಂದು ಮಂತ್ರಿಯಾದವರು ಕೂಡ ಅನರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಸಿದ್ದರಾಮಯ್ಯ ಈಗ ನಿರುದ್ಯೋಗಿಯಾಗಿದ್ದು, ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ನಿರುದ್ಯೋಗಿಗಳಾಗಿದ್ದಾರೆ. ಅವರ ಯೋಚನೆಗಳು ಹಾಗೆಯೇ ಇರುತ್ತದೆ. ಇಂದು ಮಂತ್ರಿಯಾಗಿರುವವರು ಜನರಿಂದ ಗೆದ್ದು ಬಂದಿದ್ದಾರೆ. ಅವರನ್ನು ಅನರ್ಹರು ಎಂದು ಇವರು ಹೇಗೆ ಹೇಳುತ್ತಾರೆ. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿಯಾಗಿದ್ದು, ಬಿಜೆಪಿ ಅವರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ರೀತಿ ನಮ್ಮ ಬಿಜೆಪಿ ಅಲ್ಲ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರು ಈಗ ಇರುವ ಮೂವರೇ ಉಪ ಮುಖ್ಯಮಂತ್ರಿಗಳಾಗಿ ಮುಂದುವರಿಯಬೇಕು. ಸದ್ಯಕ್ಕೆ ಬೇರೆಯವರನ್ನು ಆ ಸ್ಥಾನಕ್ಕೆ ನೇಮಕ ಮಾಡೋದಿಲ್ಲ ಎಂದಿದ್ದಾರೆ. ಮುಂದೆ ಏನಾದರೂ ಬದಲಾವಣೆ ಆಗಬೇಕಾದಲ್ಲಿ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಉಮೇಶ್ ಕತ್ತಿಗೆ ಸಚಿವ ಸ್ಥಾನ ದೊರಕದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ರಾಜಕೀಯದಲ್ಲಿ ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಬಿಜೆಪಿ ಎಲ್ಲರಿಗೂ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಮಾರ್ಚ್ 5 ರಂದು ಮಗಳ ಮದುವೆ ಇರುವ ಕಾರಣ ನಾನು ಪಕ್ಷದ ಕಾರ್ಯಕರ್ತರಿಗೆ‌ ಆಮಂತ್ರಣ ಪತ್ರಿಕೆ ನೀಡಲು ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದೇನೆ. ಸಮಯ ಬಹಳ ಕಡಿಮೆ ಇರುವ ಕಾರಣ ಎಲ್ಲಾ ಕಡೆಗಳಿಗೆ ತೆರಳಬೇಕಾಗಿದೆ. ಆದ್ದರಿಂದ ಇಂದಿನ ಸಚಿವ ಸಂಪುಟ ವಿಸ್ತರಣೆ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಬೇರೆ ಯಾವುದೇ ಉದ್ದೇಶ ಇಲ್ಲ ಎಂದರು.

ಕರಾವಳಿ ಶಾಸಕರಿಗೆ ಸಚಿವ ಸ್ಥಾನ ತಪ್ಪಿದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಅಧ್ಯಕ್ಷರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕರಾವಳಿಯನ್ನು ಬಿಜೆಪಿ ಯಾವತ್ತೂ ನಿರ್ಲಕ್ಷ್ಯ ಮಾಡಿಲ್ಲ, ಪಕ್ಷಕ್ಕೆ ಮೊದಲಿನಿಂದಲೂ ಬಹಳಷ್ಟು ಶಕ್ತಿಯನ್ನು ತುಂಬಿಕೊಂಡು ಬಂದಿದೆ ಎಂದು ಶ್ರೀರಾಮುಲು ಹೇಳಿದರು.

ABOUT THE AUTHOR

...view details