ಮಂಗಳೂರು: ಮಹಿಳೆಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ ರಿಕ್ಷಾ ಚಾಲಕನನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುನ್ನೂರು ಗ್ರಾಮದ ಸಮೀರ್ ( 22) ಎಂದು ಗುರುತಿಸಲಾಗಿದೆ.
ಮಾ.21 ರಂದು ಮಹಿಳೆಯೊಬ್ಬರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಕ್ಷಾವೊಂದನ್ನು ಹತ್ತಿದ್ದಾರೆ. ಮಹಿಳೆ ರಿಕ್ಷಾ ಹತ್ತಿದ ಕೂಡಲೇ ಪರಿಚಯ ಮಾಡಿಕೊಂಡ ಆರೋಪಿ ಸಮೀರ್, ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆ ಸೂಚಿಸಿ ಮಹಿಳೆಗೆ ತನ್ನ ಮೊಬೈಲ್ ನಂಬರ್ ನೀಡಿದ್ದಾನೆ. ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೇ ರಿಕ್ಷಾದಲ್ಲಿಯೇ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನಡೆಸಲೆತ್ನಿಸಿರುವುದಾಗಿ ಆರೋಪಿಸಲಾಗಿದೆ.