ಮಂಗಳೂರು:ನಗರದ ಫಲ್ಗುಣಿ ನದಿಗೆ ಕಪ್ಪು ಬಣ್ಣದ ಕಲುಷಿತ ನೀರು ಸೇರುತ್ತಿರುವ ಸ್ಥಳ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪಾ ಅವರು ಪರಿಶೀಲನೆ ನಡೆಸಿದ್ದಾರೆ. ವಾಸ್ತವಾಂಶ ತಿಳಿದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾರಿಂದ ಫಲ್ಗುಣಿ ನದಿಗೆ ಕಲುಷಿತ ನೀರು ಸೇರುವ ಸ್ಥಳ ವೀಕ್ಷಣೆ - ಫಲ್ಗುಣಿ ನದಿ
ಮಂಗಳೂರಿನ ಜನರಿಗೆ ಕುಡಿಯಲು ಫಲ್ಗುಣಿ ನದಿ ನೀರನ್ನು ಬಳಸಲಾಗುತ್ತದೆ. ಆದರೆ ಈ ನದಿಗೆ ಕಪ್ಪು ಬಣ್ಣದ ಕಲುಷಿತ ನೀರು ಸೇರುತ್ತಿರುವ ಆರೋಪ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪ ಅವರು ಸ್ಥಳ ವೀಕ್ಷಣೆ ಮಾಡಿದ್ದಾರೆ.
![ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾರಿಂದ ಫಲ್ಗುಣಿ ನದಿಗೆ ಕಲುಷಿತ ನೀರು ಸೇರುವ ಸ್ಥಳ ವೀಕ್ಷಣೆ Senior Civil Judge A.G.Shilpa View of the polluted water from the Phalguni River](https://etvbharatimages.akamaized.net/etvbharat/prod-images/768-512-12265396-thumbnail-3x2-river.jpg)
ತಾಲೂಕಿನ ಪಚ್ಚನಾಡಿ ಮತ್ತು ಮಂದಾರ ಗ್ರಾಮದ ಜನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಮೂಲಕ ಸಂಪರ್ಕಿಸಿ ಫಲ್ಗುಣಿ ನದಿಗೆ ಕಪ್ಪು ಬಣ್ಣದ ಕಲುಷಿತ ನೀರು ಬಿಡಲಾಗುತ್ತಿದೆ. ಮಂಗಳೂರಿನ ಜನರಿಗೆ ಕುಡಿಯಲು ಫಲ್ಗುಣಿ ನದಿ ನೀರನ್ನು ಬಳಸುತ್ತಿರುವುದರಿಂದ ಸಂಬಂಧಪಟ್ಟವರಿಗೆ ದೂರನ್ನು ನೀಡಿದ್ದರು. ಆದರೆ ಸಾರ್ವಜನಿಕರು ನೀಡಿರುವ ದೂರಿನ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜಿ. ಶಿಲ್ಪ ಅವರು ಜೂನ್ 23 ರಂದು ಪಚನಾಡಿ ಮತ್ತು ಮಂದಾರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರನ್ನು ವಿಚಾರಿಸಿದ್ದಾರೆ. ಈ ವೇಳೆ ಪಚ್ಚನಾಡಿ ಘನತ್ಯಾಜ್ಯದ ಕಲುಷಿತ ನೀರು, ಹೊಳೆಯ ಮೂಲಕ ಫಲ್ಗುಣಿ ನದಿಗೆ ಸೇರುತ್ತಿರುವ ಸ್ಥಳವನ್ನು ವೀಕ್ಷಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜಿ. ಶಿಲ್ಪ ತಿಳಿಸಿದ್ದಾರೆ.