ಮಂಗಳೂರು: ದ.ಕ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಮರಳು ಶಿಲ್ಪ ರಚನೆ ಮಾಡಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಮರಳು ಶಿಲ್ಪದಲ್ಲಿ ಭಾರತದ ಭೂಪಟದ ಒಳಗೆ ತೋರು ಬೆರಳಿಗೆ ಮತ ಗುರುತಿನ ಚಿತ್ರ ಬಿಡಿಸಲಾಗಿದೆ. ಅಲ್ಲದೆ ಒಂದು ಬದಿಯಲ್ಲಿ ವಿವಿ ಪ್ಯಾಟ್ ಹಾಗೂ ಇನ್ನೊಂದು ಬದಿಯಲ್ಲಿ 2 ಸಾವಿರ ರೂ. ನೋಟು ಹಾಗೂ ಮದ್ಯದ ಬಾಟಲಿ ಚಿತ್ರ ಬರೆದು ವೋಟ್ ನಾಟ್ ಫಾರ್ ಸೇಲ್ ಎಂದು ಬರೆಯಲಾಗಿದೆ. ಕೆಳಗಡೆ ವೋಟ್ ಫಾರ್ ಎ ಬೆಟರ್ ಇಂಡಿಯಾ, ಥಿಂಕ್ ಆ್ಯಂಡ್ ವೋಟ್, ಪ್ಲೀಸ್ ವೋಟ್ ಎಂದು ಬರೆಯಲಾಗಿದೆ.
ಈ ಮರಳು ಶಿಲ್ಪವನ್ನು ಪ್ರಸಾದ್ ಮೂಲ್ಯ ರಚಿಸಿದ್ದು, ಅವರಿಗೆ ಚಂದ್ರಹಾಸ್ ಕುಲಾಲ್ ಸಹಕರಿಸಿದ್ದಾರೆ. ಇನ್ನು ಈ ಮರಳುಶಿಲ್ಪ ರಚನೆ ಮಾಡಲು ಸುಮಾರು ಏಳು ಗಂಟೆ ಸಮಯ ವ್ಯಯವಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.
ಪಣಂಬೂರು ಬೀಚ್ನಲ್ಲಿ ಮರಳುಶಿಲ್ಪ ಈ ಸಂದರ್ಭ ದ.ಕ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಸೆಲ್ವಮಣಿ ಮಾತನಾಡಿ, ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಮರಳುಶಿಲ್ಪ ರಚನೆ ಮಾಡಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎನ್ನುವುದು ಇದರ ಮೂಲ ಉದ್ದೇಶ. ಎಲ್ಲರಲ್ಲೂ ಮತದಾನದ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.