ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಶಾಲೆಯ ರಸ್ತೆ ಬದಿಯಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆ ಆಧಿಕಾರಿಗಳು ಮಂಗಳವಾರ ಮನೆ ತೆರವು ಮಾಡಿದ್ದು, ಮನನೊಂದ ಮನೆಮಾಲೀಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಒಳಮೊಗ್ರು ಗ್ರಾಮದ ಸರ್ವೆ ನಂ.207 ರಲ್ಲಿ ದರ್ಬೆತ್ತಡ್ಕ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿದ ಜಾಗವಿದೆ. ಶಾಲೆಯ ಮುಂಭಾಗದಲ್ಲಿ ಗ್ರಾಪಂನಿಂದ ನಿರ್ಮಾಣ ಮಾಡಿರುವ ಬಸ್ ತಂಗುದಾಣದ ಹಿಂಬದಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಘುನಾಥ್ ಎಂಬುವರ ಕುಟುಂಬ ಕಳೆದ 12 ವರ್ಷಗಳಿಂದ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದರು. ಕಳೆದ ಕೆಲವು ತಿಂಗಳ ಹಿಂದೆಯೇ ಶೆಡ್‌ಗೆ ಗೋಡೆ ನಿರ್ಮಾಣ ಮಾಡಿದ್ದರು. ಇದಕ್ಕೆ ಶಾಲಾ ಎಸ್‌ಡಿಎಂಸಿ ವಿರೋಧ ವ್ಯಕ್ತಪಡಿಸಿ, ಅಲ್ಲಿ ಮನೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.
ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಅಂಬೇಡ್ಕರ್ ರಕ್ಷಣಾ ವೇದಿಕೆ ಸದಸ್ಯರು ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶೆಡ್ ಇರುವ ಸ್ಥಳದಲ್ಲಿ ಗೋಡೆ ನಿರ್ಮಾಣ ಮಾಡಿ ಕಟ್ಟಡ ನಿರ್ಮಾಣ ಮಾಡದಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ, ಗೋಡೆ ನಿರ್ಮಾಣ ಕಾರ್ಯ ಆಗಾಗಲೇ ನಡೆದಿತ್ತು.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು, ಇಲ್ಲಿ ಮನೆ ನಿರ್ಮಾಣ ಮಾಡಿರುವುದು ತಪ್ಪು. ಮೂರು ತಿಂಗಳೊಳಗಾಗಿ ಮನೆ ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದರು. ಸೂಚನೆ ನೀಡಿ ಮೂರು ತಿಂಗಳು ಕಳೆದ ಬಳಿಕ ಮಂಗಳವಾರ ಅಧಿಕಾರಿಗಳು ಸ್ಥಳಕ್ಕೆ ಬಂದು, ಮನೆಯೊಳಗಿದ್ದ ಸಾಮಗ್ರಿಗಳನ್ನು ಹೊರಗಿಟ್ಟು ಜೆಸಿಬಿ ಯಂತ್ರದ ಮೂಲಕ ಮನೆ ತೆರವುಗೊಳಿಸಿದರು.
ಇದರಿಂದ ಮನನೊಂದ ಮನೆ ಮಾಲೀಕ ರಘುನಾಥ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಘುನಾಥ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಸ್ಥಳಕ್ಕೆ ದಲಿತ ಸಂಘಟನೆಗಳ ಮುಖಂಡರು ಆಗಮಿಸಿದ್ದು, ಇಂದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನ ಅಧಿಕಾರಿಗಳಿಗೆ ನೀಡಿದ್ದಾರೆ.